ಭೂ ಸ್ವಾಧೀನ ಕೈಬಿಟ್ಟು ಸಿಎಂ ತಮ್ಮ ಮಾತು ಉಳಿಸಿಕೊಳ್ಳಲಿ: ರೈತಸಂಘಟನೆ

KannadaprabhaNewsNetwork |  
Published : Jun 22, 2025, 11:48 PM ISTUpdated : Jun 23, 2025, 12:20 PM IST
 ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿದರು | Kannada Prabha

ಸಾರಾಂಶ

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರಿಗೆ ಕರ್ನಾಟಕದ ಬಯಲು ಸೀಮೆಯ ರೈತರ ಬಗ್ಗೆ ಕನಿಷ್ಠ ಕಾಳಜಿ ಮತ್ತು ಜ್ಞಾನವಿಲ್ಲವೇ?  ಈ ಕೈಗಾರಿಕಾ ಸಚಿವರು ಬಂಡವಾಳಶಾಹಿಗಳ ಎಜೆಂಟ್ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಟೀಕಿಸಿದರು.

 ಚಿಕ್ಕಬಳ್ಳಾಪುರ :  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ರೈತರಿಗೆ ಸರ್ಕಾರಗಳು ದೊಡ್ಡ ಕಂಟಕ ತಂದೊಡ್ಡಿವೆ. ಅನ್ನ ನೀಡಿದ ತಪ್ಪಿಗೆ ಅನ್ನದಾತನನ್ನೇ ಬೀದಿಪಾಲು ಮಾಡಲು ಹೊರಟಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಲವಂತದ ಭೂಸ್ವಾಧೀನವನ್ನು ನಿಲ್ಲಿಸುವಂತೆ ಒತ್ತಾಯಿಸಿ ಕಳೆದ 1080 ದಿನಗಳಿಂದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರು ಹೋರಾಟ ಮಾಡುತ್ತಿದ್ದರೂ ಸಹ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ಸಂಯುಕ್ತ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಜನಪರ ಮತ್ತು ರೈತ ಸಂಘಟನೆಗಳಿಂದ ಜೂನ್ 25ರ ಬುಧವಾರದಂದು ದೇವನಹಳ್ಳಿ ಮಿನಿ ವಿಧಾನಸೌಧದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಕರ್ನಾಟಕ ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸಿ.ಎನ್.ಸುಷ್ಮಾ ಶ್ರೀನಿವಾಸ್ ಮಾತನಾಡಿ, ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ ಭೂಮಿಯನ್ನು ಕಿತ್ತು ಉದ್ಯಮಿಗಳಿಗೆ ಕೊಡುವ ಹುನ್ನಾರವನ್ನು ಸರ್ಕಾರ ಮಾಡಿದೆ. ಮೂರೂವರೆ ವರ್ಷದ ಹಿಂದೆ ಕೆಐಎಡಿಬಿ ಮೂಲಕ ರೈತರಿಗೆ ನೋಟಿಸ್ ನೀಡಿತ್ತು. ಯಾವುದೋ ಕೈಗಾರಿಕೋದ್ಯಮಿಗಳನ್ನು ಉದ್ಧಾರ ಮಾಡಲು, ಇದೇ ಭೂಮಿಯನ್ನು ನಂಬಿ ಬದುಕುತ್ತಿರುವ ನಮ್ಮ ರೈತರನ್ನು ಅನಾಥರನ್ನಾಗಿಸಲು ಹೊರಟ ಸರ್ಕಾರದ ಅನ್ಯಾಯವನ್ನು ವಿರೋಧಿಸಿ, ಕಳೆದ ಮೂರೂವರೆ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದ್ದಾರೆ. 

ಈ ಹೋರಾಟ ಪ್ರಾರಂಭವಾದ ನಂತರ ಸರ್ಕಾರಗಳೂ ಬದಲಾಗಿವೆ, ಆದರೆ ರೈತರಿಗೆ ಮಾತ್ರ ನ್ಯಾಯ ಸಿಕ್ಕಿಲ್ಲ. ರೈತರು ಬೀದಿಯಲ್ಲಿ ಕುಳಿತು ವರ್ಷಗಳೇ ಕಳೆದರೂ, ಅಧಿಕಾರಕ್ಕೆ ಬಂದ ಸರ್ಕಾರಗಳು ಬರೀ ನೋಟಿಸ್ ಕೊಡುವುದರಲ್ಲೇ ತಲ್ಲೀನವಾಗಿವೆ. ಹೀಗೆಯೇ ಬಿಟ್ಟರೆ ಇನ್ನು ಕೆಲವೇ ದಿನಗಳಲ್ಲಿ ನಮ್ಮ ರೈತರ ಭೂಮಿ ಕಬಳಿಸಿಯೇ ತೀರುತ್ತಾರೆ. ಇವರು ಹೋಗುತ್ತಿರುವ ರಭಸ ನೋಡಿದರೆ ರಾಜ್ಯದ ಯಾವ ರೈತರ ಕೈಯಲ್ಲೂ ಒಂದು ಇಂಚು ಭೂಮಿ ಇರಲು ಬಿಡುವುದಿಲ್ಲ, ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಇವರಿಗೆ ಬುದ್ಧಿ ಕಲಿಸಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರಿಗೆ ಕರ್ನಾಟಕದ ಬಯಲು ಸೀಮೆಯ ರೈತರ ಬಗ್ಗೆ ಕನಿಷ್ಠ ಕಾಳಜಿ ಮತ್ತು ಜ್ಞಾನವಿಲ್ಲವೇ? ಇಲ್ಲಿರುವ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಬಕಾಸುರನಂತೆ ಸಜ್ಜಾಗಿ ನಿಂತಿರುವುದು ನೋಡಿದರೆ ರೈತರಿಗೆ ಉಳಿಗಾಲವೇ ಇಲ್ಲವೇನೋ ಎನಿಸಿದೆ. ಈ ಕೈಗಾರಿಕಾ ಸಚಿವರು ಬಂಡವಾಳಶಾಹಿಗಳ ಎಜೆಂಟ್ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಟೀಕಿಸಿದರು.

ಹೋರಾಟಕ್ಕೆ ಕರೆ ಕೊಟ್ಟಾಗಲೆಲ್ಲ ತಾನು ರೈತರ ಪರ ನಿಲ್ಲುವುದಾಗಿ ಹೇಳುತ್ತಾ ಹೋರಾಟದ ದಿಕ್ಕು ತಪ್ಪಿಸುತ್ತಿರುವ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರು ಕೂಡ ತಮ್ಮ ಆಟ ಮುಂದುವರಿಸಿದ್ದಾರೆ. ಸದಾ ಬಡವರ ಪರ, ನುಡಿದಂತೆ ನಡೆಯುವ ಸರ್ಕಾರ ಎಂದು ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, ಸ್ವತಃ ನಮ್ಮ ಧರಣಿ ವೇದಿಕೆಗೆ ಬಂದು, ಫಲವತ್ತಾದ ಕೃಷಿ ಭೂಮಿಗಳಲ್ಲಿ ಕೈಗಾರಿಕೆ ಮಾಡುವುದು ಸರಿಯಲ್ಲ, ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿ ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಪಾಲಾಗಲು ಬಿಡುವುದಿಲ್ಲ ಎಂದು ಹೇಳಿ ನಮ್ಮ ಹೋರಾಟವನ್ನು ಬೆಂಬಲಿಸಿದ್ದರು. 

ಈಗ ಜಾಣ ಕಿವುಡರಾಗಿಬಿಟ್ಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಆಡಿದ ಮಾತುಗಳು ಅಧಿಕಾರಕ್ಕೆ ಬಂದ ಮೇಲೆ ಮರೆತುಬಿಟ್ಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಚನ್ನರಾಯಪಟ್ಟಣ ಹೋಬಳಿಯ ಸಣ್ಣ, ಅತಿಸಣ್ಣ ರೈತರ, ಹಿಂದುಳಿದ ಸಮುದಾಯಗಳ 1777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ತಮ್ಮನ್ನು ತಾವು ಮಾತಿಗೆ ತಪ್ಪದ ಮುಖ್ಯಮಂತ್ರಿ ಎಂದು ಸಾಬೀತುಪಡಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಕೆ.ವಿ.ನರಸಿಂಹರಾಜು, ನಂಜಪ್ಪ, ಮುಕುಂದ, ವರುಣ್, ಸುಧಾಕರ್ ಮತ್ತಿತರರು ಇದ್ದರು.

PREV
Read more Articles on

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ