ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ । ಸೂಕ್ತ ಕ್ರಮ ಕೈಗೊಳ್ಳುವಂತೆ ಭೂ ದಾಖಲೆಗಳ ಇಲಾಖೆ ರವಿ ಕುಮಾರ್‌ಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಜಗಳೂರುಪರವಾನಗಿ ಭೂಮಾಪಕರಿಗೆ ಪ್ರತಿ ಕಡತಕ್ಕೆ ನೀಡುವ ಸಂಭಾವನೆ ಬದಲಾಗಿ ಪ್ರತಿ ತಿಂಗಳು ನಿಗದಿತ ವೇತನ, ಸೇವಾ ಭದ್ರತೆ, ನೌಕರರಂತೆ ಆರೋಗ್ಯ ವಿಮೆ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪರವಾನಗಿ ಭೂಮಾಪಕರು ಜಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವಿ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಮಾರಪ್ಪ ಮಾತನಾಡಿ, ನಮ್ಮಗಳ ಸಮಸ್ಯೆಗಳನ್ನು ಭೂಧಾಖಲೆಗಳ ಆಯುಕ್ತರ ಗಮನಕ್ಕೆ ತಂದು ನಮ್ಮ ಸಮಸ್ಯೆ ಬಗೆಹರಿಸುವವರೆಗೂ ಸಾಮೂಹಿಕವಾಗಿ ಕೆಲಸ ಸ್ಥಗಿತಗೊಳಿಸಲು ಸಿದ್ಧರಿದ್ದೇವೆ. ನಾವೂ ಇಲಾಖೆಯಲ್ಲಿ ಭೂಮಾಪಕರಂತೆ ಇಲಾಖೆ ಸೂಚಿಸಿದ ಎಲ್ಲಾ ರೀತಿಯ ಕೆಲಸಗಳು ಪೋಡಿ, ಹದ್ದು ಬಸ್ತು, ಯುಪಿಒಆರ್ ತಕರಾರು ಕಡತಗಳು, ಸ್ವಾಮಿತ್ವ, ಪೋಡಿಮುಕ್ತ, ರೀ ಸರ್ವೆ, ಇ-ಸ್ವತ್ತುಗಳನ್ನು ನಿರ್ವಹಿಸಿಕೊಂಡು ಬಂದಿರುತ್ತೇವೆ. ಇಲಾಖೆಯ ಭೂಮಾಪಕರು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ನಾವು ನಿರ್ವಹಿಸುತ್ತಿರುವುದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಇದಕ್ಕೆ ಕಾಲಾವಕಾಶ ಬೇಕಾದಲ್ಲಿ ಈ ಕೂಡಲೇ ಜಾರಿಯಾಗುವಂತೆ ಕನಿಷ್ಠ ವೇತನ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.ಗೌರವಾಧ್ಯಕ್ಷ ಗಂಗಾಧರಪ್ಪ ಮಾತನಾಡಿ, ಪ್ರತಿ ಪರವಾನಗಿ ಭೂಮಾಪಕರಿಗೂ ಜವಾನರ ಆವಶ್ಯಕತೆ ಇರುವುದರಿಂದ ನೇಮಿಸಿಕೊಡಬೇಕು ಮತ್ತು ನಾವು ಅಡವಿ ಕೆಲಸ ಮಾಡುವುದರಿಂದ ನಮಗೆ ಯಾವುದೇ ರಕ್ಷಣೆ ಇಲ್ಲ, ಸೂಕ್ತ ಭದ್ರತೆಯೂ ಇಲ್ಲ, ರೀತಿಯ ಆರೋಗ್ಯದಲ್ಲಾಗಲೀ, ರೈತರಿಂದಾಗಲೀ ಮತ್ತು ಅಪಘಾತದಿಂದಾಗಲೀ, ತೊಂದರೆಯಾದಾಗ ಮತ್ತು ಅಳತೆ ಸಮಯದಲ್ಲಿ ಪ್ರಕೃತಿಯ ವಿಕೋಪದಿಂದ ಯಾವುದೇ ತೊಂದರೆಗಳು ಉಂಟಾದಲ್ಲಿ ಯಾವುದೇ ರೀತಿಯ ಸೌಲಭ್ಯ ನಮಗೆ ಇರುವುದಿಲ್ಲ. ಆದ ಕಾರಣ ನಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಇರುವುದಿಲ್ಲ. ಆದ್ದರಿಂದ ನಮಗೆ ಸೇವಾ ಭದ್ರತೆ ಸಕಲ ಸವಲತ್ತುಗಳನ್ನು ಒದಗಿಸಬೇಕು.ನಮಗೆ ತಿಂಗಳಿಗೆ ೫೦ ಸಾವಿರ ರು.ನಿಂದ ಕನಿಷ್ಠ ೬೦ ಸಾವಿರ ರು.ವೇತನ ನೀಡಬೇಕು. ನಮ್ಮನ್ನೂ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪರವಾನಗಿ ಭೂಮಾಪಕರ ಸಂಘದ ಉಪಾಧ್ಯಕ್ಷ ವಿನಯ್ ಕುಮಾರ್.ಕೆ. ಖಜಾಂಚಿ ಸುದೀಪ ಸಿವಿ. ಪ್ರಧಾನ ಕಾರ್ಯದರ್ಶಿ ಸೈಯದ್ ವಾಸಿಮ್, ಸಹ ಕಾರ್ಯದರ್ಶಿ ಶಿವಕುಮಾರ್ ಕೆ.ಎನ್., ಸರ್ವ ಪದಾಧಿಕಾರಿಗಳು, ಪರವಾನಿಗೆ ಭೂಮಾಪಕರು ಹಾಜರಿದ್ದರು