ಸಂಘಟನೇಲಿ ಕಾಂಗ್ರೆಸ್ ಸೇವಾದಳ ಬಲಿಷ್ಠಗೊಳ್ಳಲಿ

KannadaprabhaNewsNetwork |  
Published : Nov 24, 2025, 01:45 AM IST
ಭದ್ರಾವತಿ ತಾಲೂಕು ಕಾಂಗ್ರೆಸ್ ಸೇವಾದಳದಿಂದ ಭಾನುವಾರ ಆಯೋಜಿಸಲಾಗಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿ ಅವರ ೧೦೮ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಸೇವಾದಳ ರಾಜ್ಯಾಧ್ಯಕ್ಷೆ ಗಿರಿಜಾ ಹೂಗಾರ್ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸೇವಾದಳ ಘಟಕ ಸಂಘಟನೆಯಲ್ಲಿ ಎಂದಿಗೂ ತನ್ನ ಸಾಮರ್ಥ್ಯ ಕಳೆದುಕೊಳ್ಳಬಾರದು. ಅದು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಬಲಿಷ್ಠಗೊಳ್ಳಬೇಕು ಎಂದು ಕಾಂಗ್ರೆಸ್ ಸೇವಾದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗಿರಿಜಾ ಹೂಗಾರ್ ಹೇಳಿದರು.

ಭದ್ರಾವತಿ: ಕಾಂಗ್ರೆಸ್ ಸೇವಾದಳ ಘಟಕ ಸಂಘಟನೆಯಲ್ಲಿ ಎಂದಿಗೂ ತನ್ನ ಸಾಮರ್ಥ್ಯ ಕಳೆದುಕೊಳ್ಳಬಾರದು. ಅದು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಬಲಿಷ್ಠಗೊಳ್ಳಬೇಕು ಎಂದು ಕಾಂಗ್ರೆಸ್ ಸೇವಾದಳ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗಿರಿಜಾ ಹೂಗಾರ್ ಹೇಳಿದರು.

ಭಾನುವಾರ ತಾಲೂಕು ಕಾಂಗ್ರೆಸ್ ಸೇವಾ ದಳದಿಂದ ನಗರದ ನ್ಯೂಟೌನ್ ಜಯಶ್ರಿ ವೃತ್ತ ಸಮೀಪದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ೧೦೮ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಮಹಿಳೆಯರಲ್ಲಿ ಸಂಘಟನಾ ಶಕ್ತಿ ಹೆಚ್ಚಿನದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಾಗಿ ಸೇವಾ ದಳಕ್ಕೆ ಸೇರ್ಪಡೆಯಾಗಬೇಕು. ತಾಲೂಕಿನಲ್ಲಿ ಕೇವಲ ೨೦ ಮಹಿಳೆಯರು ಸೇವಾದಳಕ್ಕೆ ಸೇರ್ಪಡೆಗೊಂಡಲ್ಲಿ ಅಪಾರ ಶಕ್ತಿ ಹೊರಹೊಮ್ಮಲಿದ್ದು, ಆ ಮೂಲಕ ಸಂಘಟನೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದರು.ಇಂದಿರಾ ಗಾಂಧಿ ಅವರ ಆಡಳಿತ ವೈಖರಿ, ಬಡವರು, ದೀನದಲಿತರ ಬಗೆಗಿನ ಕಾಳಜಿ, ಸ್ಪಂದನೆ, ರೂಪಿಸಿದ ಕಾನೂನು ಮತ್ತು ಇತಿಹಾಸ ನಾವೆಲ್ಲರೂ ಅರಿಯಬೇಕು. ಈ ಸಂಘಟನೆ ಸೇರುವುದರಿಂದ ಶಿಸ್ತು, ಸಂಯಮ ಹಾಗೂ ಸಂಘಟನೆಯ ಶಕ್ತಿ ತಾನಾಗಿಯೇ ಬರುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗುತ್ತದೆ ಎಂದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ಮೂಲ ಶಕ್ತಿ ಕೇಂದ್ರ ಸೇವಾದಳವಾಗಿದ್ದು, ಸೇವಾದಳ ಹೆಚ್ಚು ಹೆಚ್ಚು ಸಂಘಟಿತಗೊಂಡಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಈ ಹಿನ್ನೆಲೆಯಲ್ಲಿ ಸೇವಾದಳ ಹೆಚ್ಚು ಸಂಘಟಿತಗೊಳಿಸುವುದು ಅನಿವಾರ್ಯವಾಗಿದೆ ಎಂದರು. ಸೇವಾದಳ ಅಧ್ಯಕ್ಷ ಕೆ.ಜೆ.ಹನುಮಂತಯ್ಯ (ಗಣೇಶ) ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಶಂಕರಘಟ್ಟ ರಮೇಶ್, ನಗರಸಭೆ ಸದಸ್ಯ ಕಾಂತರಾಜ್, ಮುಖಂಡ ಮಂಜುನಾಥ್, ಸೂಡಾ ಸದಸ್ಯ ಎಚ್.ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿದರು. ವೇದಿಕೆಯಲ್ಲಿ ಸೂಡಾ ಸದಸ್ಯೆ ವೈ.ರೇಣುಕಮ್ಮ, ಹೇಮಾವತಿ, ಜಿ.ಟಿ.ಬಸವರಾಜ್, ಚಂದ್ರಕುಮಾರ್, ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ಸೇವಾದಳ ಮುತ್ಸದಿಗಳಾದ ಹೊಸಮನೆ ತಿರುಮೂರ್ತಿ, ತಾಲೂಕು ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಸುರೇಶ್, ಘಂಟಾಗ್ಯಾಬ್ರಿಲ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಕಾರು - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸಾವು
ಕಡೂರು ಪಟ್ಟಣದ ಸುತ್ತಲೂ ಹೆಚ್ಚಿದೆ ಲೇಔಟ್ ಸಂಸ್ಕೃತಿ: ಆನಂದ್