ಎಳವೆಯಲ್ಲಿಯೇ ಸಂಸ್ಕಾರ ನೀಡುವ ಕಾರ್ಯವಾಗಲಿ: ನಟೇಶ್ ಪೂಜಾರಿ

KannadaprabhaNewsNetwork | Published : Apr 7, 2025 12:35 AM

ಸಾರಾಂಶ

ಪೆರಿಯಡ್ಕದ ನಂದಗೋಕುಲ ಶಿಶುಮಂದಿರದ ‘ಚಿಣ್ಣರ ಕಲರವ- ೨೦೨೫’ ಕಾರ್ಯಕ್ರಮದಲ್ಲಿ ಕ್ರೀಡಾ ಉದ್ಯಾನ ಉದ್ಘಾಟನೆ, ಶಿಶುಮಂದಿರಕ್ಕೆ ೧.೨೦ ಲಕ್ಷದ ಕ್ರೀಡಾ ಪರಿಕರಗಳ ದಾನ ನೀಡುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರ ನೀಡುವ ಕಾರ್ಯಗಳಾದಾಗ ಭವಿಷ್ಯತ್ತಿನಲ್ಲಿ ಅವರು ಸಮಾಜಕ್ಕೆ ಉತ್ತಮ ಸಂಪತ್ತಾಗಿ ರೂಪುಗೊಳ್ಳಲು ಸಾಧ್ಯ ಎಂದು ಉಪ್ಪಿನಂಗಡಿ ಜೆಸಿಐ ಘಟಕ ಅಧ್ಯಕ್ಷ ನಟೇಶ್ ಪೂಜಾರಿ ಪುಳಿತ್ತಡಿ ಹೇಳಿದರು.

ಪೆರಿಯಡ್ಕದ ನಂದಗೋಕುಲ ಶಿಶುಮಂದಿರದ ‘ಚಿಣ್ಣರ ಕಲರವ- ೨೦೨೫’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೀಡಾ ಉದ್ಯಾನವನ್ನು ಉದ್ಘಾಟಿಸಿ, ಶಿಶುಮಂದಿರಕ್ಕೆ ೧.೨೦ ಲಕ್ಷದ ಕ್ರೀಡಾ ಪರಿಕರಣಗಳನ್ನು ದಾನ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಸಂಸ್ಕಾರವಿಲ್ಲದಿದ್ದರೆ ಬದುಕು ವ್ಯರ್ಥ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ಭರಿಸುವ ಕೆಲಸವನ್ನು ಸಣ್ಣದ್ದರಿಂದಲೇ ಮಾಡಬೇಕು. ಈ ನಿಟ್ಟಿನಲ್ಲಿ ಶಿಶುಮಂದಿರಗಳ ಕಾರ್ಯ ಶ್ಲಾಘನೀಯ ಎಂದರು.ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಮಾತನಾಡಿ, ವಿದ್ಯಾಭಾರತಿಯಡಿಯಲ್ಲಿ ಬರುತ್ತಿರುವ ಶಿಶುಮಂದಿರಗಳಲ್ಲಿ ಸಂಸ್ಕಾರ ಭರಿತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಈ ಮೂಲಕ ಅವರನ್ನು ದೇಶದ ಅಮೂಲ್ಯ ರತ್ನಗಳನ್ನಾಗಿ ಬೆಳೆಸುವ ಕಾರ್ಯವಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಮಾತನಾಡಿ, ಇಲ್ಲಿ ಮಕ್ಕಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ಪುಟಾಣಿಗಳು ಭವಿಷ್ಯದ ಭರವಸೆಗಳಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕ್ರೀಡಾ ಉದ್ಯಾನವನಕ್ಕೆ ಆವರಣ ಗೋಡೆಯ ಕೊಡುಗೆ ನೀಡಿದ ಉದ್ಯಮಿ ಪ್ರತಾಪ್ ಪೆರಿಯಡ್ಕ ಹಾಗೂ ಗೋಡೆ ಬರಹಕ್ಕೆ ೩೦ ಸಾವಿರ ರು. ನೀಡಿದ ಸ್ಥಳದಾನಿ ಸತೀಶ್ ರಾವ್ ನೆಡ್ಚಿಲ್ ಅವರನ್ನು ಸನ್ಮಾನಿಸಲಾಯಿತು.ಶಿಶುಮಂದಿರದ ಪುಟಾಣಿಗಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ, ಪುಟಾಣಿಗಳಿಂದ ಮಾತೆಯರ ಪಾದಪೂಜೆ, ಭಾರತ ಮಾತೆಗೆ ದೀಪಪ್ರಜ್ವಲನೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಸನ್ನ ಕುಮಾರ್ ಪೆರಿಯಡ್ಕ, ಪೆರಿಯಡ್ಕ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸದಾನಂದ ಶೆಟ್ಟಿ ಕಿಂಡೋವು, ಶ್ರೀರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಪ್ರಮುಖರಾದ ಶಂಕರನಾರಾಯಣ ಭಟ್, ಜಯಂತ ಪೋರೋಳಿ, ಹರೀಶ್ ಪಟ್ಲ, ಹರೀಶ್ವರ ಮೊಗ್ರಾಲ್, ಶಿಶುಮಂದಿರದ ಕೋಶಾಧಿಕಾರಿ ಹರಿಪ್ರಸಾದ್ ಕೂವೆಚ್ಚಾರು ಮತ್ತಿತರರು ಉಪಸ್ಥಿತರಿದ್ದರು.

ಶಿಶು ಮಂದಿರದ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ ಸ್ವಾಗತಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು ವಂದಿಸಿದರು. ಅವಿನಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಾತಾಜಿಗಳಾದ ಸುಮಲತಾ ಮತ್ತು ಅಶ್ವಿನಿ ಸಹಕರಿಸಿದರು.

Share this article