ಬೀದರ್: ಲೋಕಸಭಾ ಸಾರ್ವತ್ರಿಕ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದ್ದು, ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಮಂಗಳವಾರ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಿಯೋಜಿತ ಎಫ್‌ಎಸ್‌ಟಿ, ಎಸ್‌ಎಸ್‌ಟಿ, ವಿವಿಟಿ ಹಾಗೂ ವಿಎಸ್‌ಟಿ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಯೊಂದು ತಂಡದ ಸದಸ್ಯರು ತಮಗೆವಹಿಸಿದ ಕರ್ತವ್ಯ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಹಾಗೂ ತಮ್ಮ ಪರವಾಗಿ ಯಾರಿಗಾದರೂ ಕಳಿಸುವದು ಮತ್ತು ಒಂದು ತಂಡದಿಂದ ಮತ್ತೊಂದು ತಂಡದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಈಗಾಗಲೇ ತಮಗೆ ನಿಯೋಜಿತ ಕೆಲಸದಲ್ಲಿ ಕರ್ತವ್ಯ ನಿರ್ವಹಿಸಬೇಕು ಅನಿವಾರ್ಯ ಕಾರಣವಿದ್ದಾಗ ಮಾತ್ರ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಇದು ಚುನಾವಣೆಯ ಕರ್ತವ್ಯವಾಗಿದ್ದು ಯಾರೂ ಬೇಜವಾಬ್ದಾರಿ ತೋರಿಸುವ ಹಾಗಿಲ್ಲ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಎಲೆಕ್ಷನ್ ಸೀಜರ್ ಮ್ಯಾನೇಜಮೆಂಟ್ ಸಿಸ್ಟಮ್ ಎಂಬುವದು ಹೊಸದಾಗಿ ಆ್ಯಪ್ ಬಂದಿದ್ದು, ಇದರ ಬಗ್ಗೆಯೂ ತಾವು ತಿಳಿದುಕೊಳ್ಳಬೇಕು ಮತ್ತು ಸಿ-ವಿಜಿಲ್ ಆ್ಯಪ್ ಬಗ್ಗೆ ಮತ್ತೊಮ್ಮೆ ತಮಗೆ ತರಬೇತಿ ನೀಡಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಒಬ್ಬ ವ್ಯಕ್ತಿ 50 ಸಾವಿರ ರು.ವರೆಗೆ ಹಾಗೂ ಸ್ಟಾರ್ ಕ್ಯಾಂಪೇನರ್‌ಗೆ 1 ಲಕ್ಷ ರು.ವರೆಗೆ ಹಣದ ತೆಗೆದುಕೊಂಡು ಹೋಗಲು ಮಿತಿ ಇರುತ್ತದೆ ಇಂತಹ ಹಲವಾರು ಮಾಹಿತಿಗಳನ್ನು ತಾವು ತಿಳಿದುಕೊಳ್ಳಬೇಕೆಂದರು.ಎಆರ್‌ಒಗಳು ಸಭೆ, ಸಮಾರಂಭ ಹಾಗೂ ಮೆರವಣಿಗೆಗಳಿಗೆ ಅನುಮತಿ ನೀಡಿದರೆ ಆರ್‌ಓಗಳು ಚುನಾವಣಾ ಪ್ರಚಾರ ವಾಹನಗಳಿಗೆ ಅನುಮತಿ ನೀಡಬೇಕು ಮತ್ತು ಚುನಾವಣೆಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದು ವಾಹನಗಳಲ್ಲಿ ಸಾಗಿಸಲು ಅವಕಾಶವಿರುತ್ತದೆ. ಚುನಾವಣಾ ಪ್ರಚಾರ ಕಾರ್ಯಕ್ರಮ ರಾತ್ರಿ 10 ಗಂಟೆಗಳವರೆಗೆ ನಡೆಯಲು ಅನುಮತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ನೌಕರರು ಯಾವುದೇ ಪಕ್ಷಗಳ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವದು ಹಾಗೂ ಯಾವುದೇ ರಾಜಕೀಯ ಪ್ರೇರಿತ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಹಾಗೇ ಮಾಡಿದಲ್ಲಿ ತಾವು ಅಮಾನತ್ತಿಗೊಳಪಡುತ್ತಾರೆ ಮತ್ತು ಯಾವುದೇ ರಾಜಕೀಯ ಪಕ್ಷಗಳ ಕಚೇರಿಯು ಚರ್ಚ್, ಮಂದಿರ, ಮಸೀದಿಗಳಂಥ ಧಾರ್ಮಿಕ ಸ್ಥಳಗಳಿಂದ 200 ಮೀಟರ್ ದೂರದಲ್ಲಿರಬೇಕು ಎಂದು ಹೇಳಿದರು.ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಸಭೆ ಸಮಾರಂಭಗಳು ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಮತ್ತು 10 ಲಕ್ಷ ರು.ಗಿಂತ ಹೆಚ್ಚಿನ ಹಣ ಜಪ್ತಿ ಮಾಡಿದಾಗ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು ಎಂಬ ಇತರೆ ಮಾಹಿತಿಗಳನ್ನು ಅಧಿಕಾರಿಗಳಿಗೆ ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಲವೀಶ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಚುನಾವಣಾ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್, ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರು ಸೇರಿದಂತೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.