ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷಚೇತನರು ಅಗಾಧ ಶಕ್ತಿಯುಳ್ಳವರು, ಅವರು ಕ್ರೀಡಾಕೂಟದಲ್ಲಿ ಗೆಲ್ಲುವುದರ ಜೊತಗೆ ಜೀವನವನ್ನು ಗೆಲ್ಲಬೇಕಾಗಿದೆ. ನಿಮ್ಮ ಜೀವನ ಪಯಣದಲ್ಲಿ ಯಶಸ್ಸು ಸಿಗಲಿ ಎಂದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ಅವರು ಬಿ.ವಿ.ವಿ.ಸಂಘ ಆಟದ ಮೈದಾನದಲ್ಲಿ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ಕಿವುಡರ ರಾಜ್ಯಮಟ್ಟದ 14ನೇ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರಲ್ಲಿ ಅಗಾಧವಾದ ಶಕ್ತಿ ಇದೆ. ಅವರಲ್ಲಿರುವ ಕ್ರೀಡಾಪ್ರತಿಭೆ ಅನಾವರಣಕ್ಕೆ ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿಯೂ ಸಾಧನೆ ಮುಂದುವರೆಯಲಿ. ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಬಂದ ನಂತರ ಕ್ರೀಡಾಕ್ಷೇತ್ರಕ್ಕೆ ಅಪಾರವಾದ ಯೋಜನೆಗಳ ಮೂಲಕ ಶಕ್ತಿ ತುಂಬಿದ್ದರಿಂದ ಇಂದು ಭಾರತದ ಕ್ರೀಡಾಪಟುಗಳು ಜಗತ್ತಿನಾದ್ಯಂತ ದಾಖಲೆಯ ಸಾಧನೆ ಮಾಡುತ್ತಿದ್ದಾರೆ. ವಿಶೇಷಚೇತನರು ಕ್ರೀಡೆಯಲ್ಲಿ ಕ್ರೀಡಾಕೂಟದಲ್ಲಿ ಗೆಲ್ಲುವುದರ ಮೂಲಕ ತಮ್ಮ ಬದುಕಿನ ಜೀವನವನ್ನು ಗೆಲ್ಲಲ್ಲಿ ಆ ಭಗವಂತ ಅವರಿಗೆ ಶಕ್ತಿ ತುಂಬಲಿ ಎಂದರು.ಮುಖ್ಯ ಅತಿಥಿಳಾಗಿ ಆಗಮಿಸಿ ಕ್ರೀಡಾಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಾಗಲಕೋಟೆ ಇನ್ನರ್‌ವಿಲ್ ಕ್ಲಬ್‌ನ ಅಧ್ಯಕ್ಷೆ ಶ್ರೀಲತಾ ಹೆಂಜಲ್ ಮಾತನಾಡಿ, ಜ್ಞಾನ ಹಾಗೂ ಮಾನಸಿಕ ಬೆಳವಣಿಗೆ ಜೊತೆಗೆ ಶಾರೀರಿಕ ಬೆಳವಣಿಗೆ ಮುಖ್ಯವಾಗಿದೆ ಎಂದರು.
ನವದೆಹಲಿ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ವಿ.ಕುಮಾರ ಸನ್ನೆ ಮೂಲಕ ಮಾತನಾಡಿ, ನವೆಂಬರ್ ಅಥವಾ ಡಿಸೆಂಬರರ್‌ನಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿರಿ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ರಾಘವೇಂದ್ರ ಜಾಧವ, 14ನೇ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಪಾಟೀಲ, ಕ್ರೀಡಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಜಿ.ಎಸ್.ನವೀನಕುಮಾರ, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಸುನೀಲ ಕಂದಕೂರ ಇದ್ದರು.
---25 ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗಿ
ಕಾರ್ಯಕ್ರಮಕ್ಕೂ ಮುಂಚೆ ಬೇರೆ ಬೇರೆ ರಾಜ್ಯದಿಂದ ಬಂದಂತ ಕ್ರೀಡಾಪಟುಗಳಿಂದ ಪಥಸಂಚಲನ, ಕ್ರೀಡಾಧ್ವಜಾರೋಹಣ, ಕ್ರೀಡಾ ಪ್ರತಿಜ್ಞಾವಿಧಿಗಳು ಜರುಗಿದವು. 25 ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರಎಸೆತ, ಮಹಿಳೆಯರ ಹಾಗೂ 600 ಮೀ ಹಾಗೂ 1600 ಮೀ ಓಟ ಸೇರಿಂದತೆ ಅನೇಕ ಕ್ರೀಡೆಗಳು ಜರುಗಿದವು.--
ಗಮನಸೇಳೆದ ಸನ್ನೆ ಭಾಷೆ :ಮನದ ಮಾತು, ಸನ್ನೆ ಮಾತು, ದೃಷ್ಟಿ ಮಾತು ನೋಡುಗರನ್ನು ಮುಗ್ಧರನ್ನಾಗಿಸಿತು. ಕಿವುಡ ಮತ್ತು ಮೂಗ ವಿಶೇಷ ಚೇತನರು ಸಮಯಕ್ಕನುಗುಣವಾಗಿ ಕ್ರೀಡಾಕೂಟದಲ್ಲಿ ಭಾಗಿಯಾಗಿ, ಪ್ರತಿ ಕ್ರೀಡಾಪಟುಗಳಿಗೆ ಸನ್ನೆ ಭಾಷೆಯ ಮೂಲಕ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಪ್ರೇರೇಪಿಸುವ ಸನ್ನಿವೇಶಗಳು ಮನ ಮುಟ್ಟಯವಂತಿದ್ದವು. ಮನದ ಮಾತುಗಳು, ಕಣ್ಣಿನ ನೋಟಗಳು, ಕೈ ಸನ್ನೆ ಬಾಯಿ ಸನ್ನೆ ಕಣ್ಣ ಸನ್ನೆ ಎಲ್ಲವೂ ಶಾಂತವಾದರೂ ಕ್ರೀಡಾಪಟುಗಳು ಆನಂದ ತುಂಬಿ ಹರಿದಿತ್ತು.