ನರಗುಂದ: ತಾಲೂಕಿನ ರೈತರು ಮುಂಗಾರು ಹಂಗಾಮಿನ ಬೆಳೆ ಹಾನಿ ಮಾಡಿಕೊಂಡು ತೊಂದರೆಗೆ ಸಿಲುಕಿದ್ದಾರೆ. ಸರ್ಕಾರ ಬೇಗ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದರು.
ಅವರು ಶುಕ್ರವಾರ ಪಟ್ಟಣದ ಈರಣ್ಣ ನವಲಗುಂದವರ ಟ್ಯಾಂಕರ್ ಮೂಲಕ ಜಮೀನುಗಳಿಗೆ ನೀರು ಹಾಯಿಸುವ ಸ್ಥಳಕ್ಕೆ ಭೇಟಿ ನೀಡಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆಯಾಗಿದೆ. ರೈತ ಬಿತ್ತನೆ ಮಾಡಿದ ಬೆಳೆಗಳು ಮಳೆಯಾಗದೆ ತೇವಾಂಶ ಕೊರತೆಯಿಂದ ಒಣಗಿ 3 ತಿಂಗಳ ಗತಿಸಿದರೂ ಸಹ ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡದೆ ಅನ್ಯಾಯ ಮಾಡುತ್ತದೆ ಎಂದು ಗಂಭೀರವಾದ ಆರೋಪ ಮಾಡಿದರು. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವಾಣಿಜ್ಯ ಬೆಳೆಗಳಾದ ಕಡಲೆ, ಜೋಳ, ಗೋಧಿ ಸೇರಿದಂತೆ ಮುಂತಾದ ಬೆಳೆಗಳನ್ನು ರಕ್ಷಣೆ ಮಾಡಲು ಈರಣ್ಣ ನವಲಗುಂದವರು ಪಟ್ಟಣದ ದೇಸಾಯಿ ಬಾವಿಯಿಂದ 10 ಟ್ಯಾಂಕರ್ ಮೂಲಕ ಪ್ರತಿ ಎಕರೆಗೆ 5ರಿಂದ 6 ಸಾವಿರ ಖರ್ಚು ಮಾಡಿ ನೀರು ಹಾಯಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಬೇಗ ರೈತರ ಕೃಷಿ ಸಾಲ ಮನ್ನಾ ಮಾಡಿ ಬೆಳೆ ಹಾನಿ ಮಾಡಿಕೊಂಡ ರೈತ ಸಮುದಾಯಕ್ಕೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಈ ಸಂದರ್ಬದಲ್ಲಿ ಶರಣಪ್ಪ ನವಲಗುಂದ, ಪ್ರಕಾಶ ಪಾಟೀಲ, ಶಂಕರ, ಶಂಭು ಹಂಚಿನಾಳ, ಫಕೀರಪ್ಪ ಸವದತ್ತಿ, ಶಿವಯ್ಯ ಹಾರುಗಿರಿಮಠ, ಶಿವಾನಂದ ಗದ್ದನಕೇರಿ, ಅಂಬರೀಶ ಶಬರಿ, ಮುತ್ತು, ಶಿವಾನಂದ ಪೂಜಾರ ಸೇರಿದಂತೆ ಮುಂತಾದವರು ಇದ್ದರು.