ನರಗುಂದ: ಇತ್ತೀಚೆಗೆ ಬಸ್‌ನಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಬಾರ್ಕಿ ಆಗ್ರಹಿಸಿದರು.
ನ.12 ರಂದು ತಾಲೂಕಿನ ಕೊಣ್ಣೂರ ಬಸ್ ನಿಲ್ದಾಣದ ಬಳಿ ಬಸ್ ಚಕ್ರಕ್ಕೆ ಸಿಲುಕಿ ಅಪಘಾತದಲ್ಲಿ ಮರಣ ಹೊಂದಿದ ಪಟ್ಟಣದ ಶ್ರೀಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಮಣಿಕಟ್ಟಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎಬಿವಿಪಿ ವಿದ್ಯಾರ್ಥಿಗಳು ಮಾತನಾಡಿ, ಶಕ್ತಿ ಯೋಜನೆ ಜಾರಿಯಿಂದ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದೇ ಗ್ರಾಮದಿಂದ ನಡೆದುಕೊಂಡು ಹೋಗುವಂತ ಸ್ಥಿತಿ ಕಾಣುತ್ತಿವೆ. ಬಸ್ ಹತ್ತಲು ಜಾಗವಿಲ್ಲದ ಸ್ಥಿತಿ ಇದ್ದರೂ ಬಾಗಿಲಲ್ಲಿ ನಿಂತುಕೊಂಡು ಪ್ರಯಾಣಿಸುವಂತಹ ಸನ್ನಿವೇಶ ನೋಡಿದ್ದೇವೆ. ಸರ್ಕಾರಕ್ಕೆ ಹೆಚ್ವಿನ ಲಾಭ ತೋರಿಸಲು ಗ್ರಾಮೀಣ ಪ್ರದೇಶಗಳಿಗೆ ಬಸ್ ಬಿಡದೇ ದೂರದ ಊರುಗಳಿಗೆ ಬಸ್ ಬಿಡುತ್ತಿದ್ದಾರೆ. ಹೀಗಾಗಿ ಅನೇಕ ದುರ್ಘಟನೆಗಳು ನಡೆಯುತ್ತಿವೆ. ಆದ್ದರಿಂದ ದುರ್ಘಟನೆ ತಪ್ಪಿಸಲು ಗ್ರಾಮೀಣ ಭಾಗಕ್ಕೆ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಬಿಡಬೇಕೆಂದು ಮನವಿ ಮಾಡಿದರು.ತಹಸೀಲ್ದಾರ ಶ್ರೀಶೈಲ ತಳವಾರ ಎಬಿವಿಪಿ ವಿದ್ಯಾಥಿಗಳು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವದೆಂದು ಹೇಳಿದರು.
ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಪ್ರಶಾಂತ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಬಿಡಲು ಕ್ರಮಕೈಗೊಳ್ಳಲಾಗುವುದು ಎಂದರು.ವಿಭಾಗ ಸೇವಾ ಪ್ರಮುಖ ರವಿ ನರೇಗಲ್ಲ, ನಗರ ಕಾರ್ಯದರ್ಶಿ ಅಭಿಷೇಕ ನವಲಗುಂದ ಮತ್ತು ಕಾರ್ಯಕರ್ತರು ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.