ಹಾವೇರಿ: ರೈತರ ಆತ್ಮಹತ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾದ ಅಧ್ಯಯನ ನಡೆಸಿ, ರೈತರ ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಒತ್ತಾಯಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಿದೆ. ಸರ್ಕಾರ ರೈತರ ಆತ್ಮಹತ್ಯೆಗೆ ಹಿಂದಿರುವ ಕಾರಣಗಳೇನು ಎಂದು ಹುಡುಕುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡಬೇಕು. ರೈತ ಸಂಘಟನೆಗಳ ಮುಖಂಡರನ್ನು ಒಳಗೊಂಡಂತಹ ಅಧ್ಯಯನ ಸಮಿತಿಯನ್ನು ರಚಿಸಿ ರೈತರ ಆತ್ಮಹತ್ಯೆಗಳನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.ಯಾವುದೇ ಸರ್ಕಾರ ಬಂದರೂ ಕೃಷಿ ಸರಿಯಾದ ದಾರಿಯಲ್ಲಿ ಮುಂದುವರಿಯಬಾರದು ಎಂಬ ಧೋರಣೆ ಹೊಂದಿದ್ದು, ರೈತರಿಗೆ ಸಮರ್ಪಕ ಬೀಜ, ರಸಗೊಬ್ಬರ ಜತೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ರೀತಿ ವ್ಯವಸ್ಥಿತವಾಗಿ ನೋಡಿಕೊಳ್ಳುವ ಜಾಲ ಹೊಂದಿವೆ. ಬಂಡವಾಳಶಾಹಿಗಳು ಆಳುತ್ತಿರುವ ಸರ್ಕಾರಗಳ ಮೂಲಕ ಕೃಷಿಯನ್ನು ನಷ್ಟದಲ್ಲಿಟ್ಟು ರೈತರ ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವ ಕುತಂತ್ರದ ಧೋರಣೆಯನ್ನು ಸರ್ಕಾರಗಳು ಹೊಂದಿವೆ. ಮುಂದಿನ ಸರ್ಕಾರ ಯಾವುದೇ ಬರಲಿ, ರೈತ ವಿರೋಧಿ ನೀತಿಗಳನ್ನು ತಂದಲ್ಲಿ ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು. ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಕೃಷಿಯಲ್ಲಿ ತೊಡಗಿರುವ ಹೊಸ ತಲೆಮಾರಿನ ರೈತರಿಗೆ ಕೃಷಿಯಲ್ಲಿನ ಬಿಕ್ಕಟ್ಟು, ಸಮಸ್ಯೆ ನಿವಾರಣೆಗೆ ಹೇಗೆ ಎದುರಿಸಬೇಕು ಹಾಗೂ ರೈತರನ್ನು ಸಂಘಟನೆ ಮಾಡುವ ಬಗ್ಗೆ ಮೇ ೩೧ರಿಂದ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಮೂರು ದಿನಗಳ ನಾಯಕತ್ವ ತರಬೇತಿ ಶಿಬಿರ ಆಯೋಜಿಸಿದೆ. ಈ ಶಿಬಿರ ರೈತ ಸಮುದಾಯಕ್ಕೆ ಬಹಳ ಮುಖ್ಯವಾಗಿದ್ದು, ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.ಕಳೆದ ಒಂದು ವಾರದಿಂದ ಮಳೆ ಆಗುತ್ತಿರುವುದು ಸಂತಸ ತಂದಿದೆ. ರೈತ ಆತ್ಮಹತ್ಯೆ ಬಗ್ಗೆ ಸಚಿವರು ಕ್ಷುಲ್ಲಕ ಮಾತುಗಳನ್ನು ಆಡಿದ್ದು ಖಂಡನೀಯ. ರೈತರ ಆತ್ಮಹತ್ಯೆ ಸರ್ಕಾರವು ಮಾಡುತ್ತಿರುವ ವ್ಯವಸ್ಥಿತವಾದ ಕಗ್ಗೊಲೆ ಆಗಿದೆ ಎಂದರು.ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ದೆಹಲಿಯಲ್ಲಿ ಹದಿಮೂರು ತಿಂಗಳು ನಡೆದ ರೈತರ ಹೋರಾಟದ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಕಾಗಿನೆಲೆಯ ಕನಕ ಸಭಾಭವನದಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಚಾಲನೆ ನೀಡಿದ್ದಾರೆ. ರೈತ ಹೋರಾಟಗಾರ ನಂಜುಂಡಸ್ವಾಮಿ ಅವರ ಜೀವನ ಚರಿತ್ರೆ ಕುರಿತ ನಾಟಕ ಪ್ರದರ್ಶನ ಯುವ ರೈತರು ನೋಡಬೇಕು ಎಂದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ರೈತ ಮುಖಂಡರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಕೇಸರಿ ಮನೋಹರ ಪಾಟೀಲ, ಕಬಡ್ಡಿ ನರೇಂದ್ರ ಬಾಬು ಇತರರು ಇದ್ದರು. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಿ: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲೂ ರಸಗೊಬ್ಬರ ಬಫರ್ ಸ್ಟಾಕ್ ಇಲ್ಲ. ಉತ್ತಮ ಮಳೆಯಾದರೆ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿ ಗೊಬ್ಬರದ ಕೊರತೆ ಎದುರಾಗಲಿದೆ. ಗೊಬ್ಬರದ ಕೊರತೆಯಾದರೆ ರೈತರು ಪ್ರತಿಭಟನೆಗೆ ಇಳಿದು ಮತ್ತೊಮ್ಮೆ ಗೋಲಿಬಾರ್ ನಡೆದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು ಸಮರ್ಪಕವಾಗಿ ಬೀಜ, ಗೊಬ್ಬರ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಜಿಲ್ಲಾಡಳಿತವು ಕೂಡ ಸರ್ಕಾರದ ಜತೆಗೆ ಸಮಾಲೋಚಿಸಿ, ಅಗತ್ಯ ದಾಸ್ತಾನು ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.