ಮನುಷ್ಯನಿಗೆ ಮಾನಸಿಕ ನೆಮ್ಮದಿ, ಮನಶಾಂತಿ ಬೇಕಿದೆ: ಶಾಸಕ ಟಿ.ಮಂಜು

KannadaprabhaNewsNetwork | Published : May 27, 2024 1:05 AM

ಸಾರಾಂಶ

ಮನುಷ್ಯನಿಗೆ ಬೇಕಾದ ಮಾನಸಿಕ ನೆಮ್ಮದಿ ಮತ್ತು ಮನಶಾಂತಿ ನೀಡುವ ಕೆಲಸವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮಾಡುತ್ತಿವೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮನುಷ್ಯನಿಗೆ ಬೇಕಾದ ಮಾನಸಿಕ ನೆಮ್ಮದಿ ಮತ್ತು ಮನಶಾಂತಿ ನೀಡುವ ಕೆಲಸವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮಾಡುತ್ತಿವೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ನೂತನ ಧ್ಯಾನಮಂದಿರ ಹಾಗೂ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮಾನವನಿಗೆ ಹಣ, ಆಸ್ತಿ, ಹೆಸರು, ಕೀರ್ತಿ ಎಷ್ಟೇ ಇದ್ದರು ಶಾಂತಿ, ನೆಮ್ಮದಿ ಬೇಕು. ವಿಶ್ವಶಾಂತಿಗಾಗಿ ಈ ಸಂಸ್ಥೆಗಳು ಮಾಡುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ ಎಂದರು.ದೇವರೊಬ್ಬ ನಾಮಹಲವು ಎಂಬ ತತ್ವದಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮಾನವನಿಗೆ ಶಾಂತಿ, ಸಹನೆ, ತುಂಬುವ ಮೂಲಕ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿ ಮಾನವನನ್ನು ದೇವಮಾನವನನ್ನಾಗಿ ರೂಪುಗೊಳ್ಳುವಂತೆ ಮಾಡುತ್ತಿವೆ ಎಂದು ಹೇಳಿದರು.

ಹಳೆಯ ಕಟ್ಟಡ ಕೆಡವಿ ಎರಡು ಅಂತಸ್ತುಗಳನ್ನು ನಿರ್ಮಾಣ ಮಾಡಿದರೆ ಧ್ಯಾನ ಕೇಂದ್ರ ಹಾಗೂ ಮನೆ ಅಥವಾ ಕಚೇರಿ ಕೆಲಸ ಕಾರ್ಯಗಳಿಗೆ ಸುಲಭವಾಗಲಿದೆ ಎಂಬ ದೃಷ್ಟಿಯಿಂದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನಾನೂ ಸಹ ಈ ಸಂಸ್ಥೆಯ ಸಹಸದಸ್ಯನಾಗಿ ಇರಲು ಇಚ್ಚಿಸುತ್ತೇನೆ ಎಂದರು.ಸಮಾಜಸೇವಕ ಮಲ್ಲಿಕಾರ್ಜುನ್ ಮಾತನಾಡಿ, 140 ದೇಶಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಧ್ಯಾನಕೇಂದ್ರಗಳಿವೆ. ಬಾಹ್ಯ ಒತ್ತಡಗಳಿಂದ ಜರ್ಜರಿತವಾಗಿರುವ ಮಾನವನಿಗೆ ಒತ್ತಡಗಳನ್ನು ನಿವಾರಿಸಿ ಮಾನಸಿಕ ನೆಮ್ಮದಿಯನ್ನು ತುಂಬುವ ಕೆಲಸವನ್ನು ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮೈಸೂರು ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಲಕ್ಷ್ಮಿಜಿ, ಸ್ಥಳೀಯ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಸವಿತ, ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಸಂಚಾಲಕರು ಜಿಪಂ ಮಾಜಿ ಉಪಾಧ್ಯಕ್ಷ ಅಂಬರೀಶ್, ಡಾ.ದಿವಾಕರ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಪುಟ್ಟಸ್ವಾಮಿ, ರಮೇಶ್‌ಗೌಡ, ಧನೇಂದ್ರಗೌಡ, ಮೋಹನ್, ಶಿಕ್ಷಕಿ ಸುಧಾಮಣಿ ದಿವಾಕರ್, ಪ್ರಸ್ ಪ್ರಭಣ್ಣ ಸೇರಿದಂತೆ ಹಲವರಿದ್ದರು.

Share this article