ನೇಮಕಾತಿಯಲ್ಲಿ ಸರ್ಕಾರ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಲಿ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಲು, ಅಭಿವೃದ್ಧಿಪಡಿಸಲು ಮುಖ್ಯವಾಗಿ ಖಾಸಗಿ ಮತ್ತು ಸರ್ಕಾರಿ ಹುದ್ಧೆಗಳ ನೇಮಕಾತಿಯಲ್ಲಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು, ಆ ಮೂಲಕ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅವಮಾನವನ್ನು ತಪ್ಪಿಸಬೇಕು ಎಂದು ಸೊರಬದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕೆ.ಪಿ. ಮಾನ್ವಿ ಕರೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಕರ್ನಾಟಕದಲ್ಲಿ ಆಗುವ ವಿವಿಧ ಖಾಸಗಿ ಮತ್ತು ಸರ್ಕಾರಿ ಹುದ್ಧೆಗಳ ನೇಮಕಾತಿಯಲ್ಲಿ ಕನ್ನಡಿಗರನ್ನೇ ಆಯ್ಕೆ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅವಮಾನವನ್ನು ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕೆ.ಪಿ. ಮಾನ್ವಿ ಕರೂರು ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ 18ನೇಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಜಗತ್ತಿನ ಯಾವುದೇ ಭಾಷೆ ಮನುಷ್ಯನ ಬದುಕನ್ನು ರೂಪಿಸಬೇಕು. ಜೀವನಕ್ಕೊಂದು ಆಧಾರವಲ್ಲದ ಸಾಹಿತ್ಯ, ಭಾಷೆ ಅಳಿವಿನ ಅಂಚಿಗೆ ಸರಿಯುತ್ತದೆ. ಅಂತರ ರಾಷ್ಟ್ರೀಯ ಕಂಪನಿ, ರಾಷ್ಟ್ರೀಕೃತ ಬ್ಯಾಂಕ್, ಕಂಪನಿಗಳಲ್ಲಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತಾಗಿದೆ. ಕನ್ನಡ ಭಾಷೆಗೆ ಬಂದಿರುವ ಸ್ಥಿತಿಯನ್ನು ಅರಿಯಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಆದ್ದರಿಂದ ಕನ್ನಡ ಉಳಿಸುವುದಾದರೆ ಮೊದಲು ಉದ್ಯೋಗದಲ್ಲಿ ಅವಕಾಶ ಸಿಗಬೇಕು. ಇದಕ್ಕಾಗಿ ಹೋರಾಟಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.

ಜಿಲ್ಲೆಯ ಬಹಳಷ್ಟು ಹಳ್ಳಿಗಳಲ್ಲಿ ಶಿಕ್ಷಕರ ಕೊರತೆ ಎದುರಿಸುವಂತಾಗಿದೆ. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ವಿವಿಧ ಇಲಾಖೆಗಳಲ್ಲಿ ನೌಕರರಿಲ್ಲ. ನೇಮಕಾತಿಗಳು ನಿರಂತರವಾಗಿ ಸಾಗುತ್ತಲೇ ಇವೆ. ಆದರೆ ನಗರದ ಮೇಲಿನ ವ್ಯಾಮೋಹದಿಂದ ಹಳ್ಳಿಗಳು ಬಲಿಪಶುಗಳಾಗಿವೆ. ಸರ್ಕಾರ ನೇಮಕಾತಿಯ ವಿಚಾರದಲ್ಲಿ ನೌಕರರಿಗೆ ತೋರಿಸುವ ಸ್ಥಳಗಳ ಆಯ್ಕೆ ತಕ್ಷಣವೇ ನಿಲ್ಲಿಸಬೇಕು. ಮೊದಲು ಗ್ರಾಮೀಣ ಪ್ರದೇಶಗಳಿಗೆ ಹುದ್ಧೆಗಳನ್ನು ತುಂಬಬೇಕು. ಇಲ್ಲವಾದಲ್ಲಿ ರಾಜ್ಯದ ಬಹುತೇಕ ಕನ್ನಡ ಶಾಲೆಗಳು ಮುಚ್ಚಿಹೋಗುವ ಪರಿಸ್ಥಿತಿ ನಿರ್ಮಾಣವಾಗುವ ದುರಂತತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದ ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಬೆಳಕಿಗೆ ಬಾರದೇ ಶಾಲಾ ಕಾಂಪೌಂಡ್, ಕೊಠಡಿಗಳಲ್ಲಿ ಮುಚ್ಚಿಹೋಗುತ್ತಿವೆ. ಶಾಲೆ-ಕಾಲೇಜು ಸಮಿತಿಗಳು ಇದ್ದರೂ ಇಲ್ಲದಂತಿವೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿನಿಯರಿಗೆ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ ಒಳಗೊಂಡ ಕ್ಷೇಮಪಾಲನಾ ಸಮಿತಿ ರಚನೆಯಾಗಿ ಜಾರಿಗೆ ಬರಬೇಕಿದೆ. ನಮಗೆ ಸ್ವಾತಂತ್ರ್ಯ ಬಂದು 75 ವಸಂತಗಳು ಕಳೆದರೂ, ಹೆಣ್ಣು ಅಭದ್ರತೆಯಲ್ಲಿ ಬದುಕುವಂತಾಗಿದೆ. ಸ್ವತಂತ್ರವಾಗಿ ಬದುಕುವ ಶಕ್ತಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಲಿಂಗ ತಾರತಮ್ಯವೇ ಕಾರಣ ಎಂದು ದೂರಿದರು.

ಸಮ್ಮೇಳನ ಉದ್ಘಾಟಿಸಿದ ಸೊರಬ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿನಿ ಆರ್.ವೈಷ್ಣವಿ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಯಬೇಕಾದರೆ ಸಾಹಿತಿಗಳ ಮತ್ತು ಕವಿಗಳ, ವೈಚಾರಿಕ ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯಾಭಿರುಚಿ ಹೆಚ್ಚುವುದರ ಜೊತೆಗೆ ಜ್ಞಾನ ಸಂಪತ್ತು ಗಳಿಸಬಹುದು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣದಲ್ಲಿ, ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಶೇ.70ರಷ್ಟು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬಾರದಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಶಿಕ್ಷಣ ಎನ್ನುವುದು ಅಂಕ ಗಳಿಕೆಗಷ್ಟೇ ಸೀಮಿತವಾಗಿದೆ. ಪ್ರಪಂಚದಲ್ಲಿ 8 ಸಾವಿರಕ್ಕೂ ಅಧಿಕ ಭಾಷೆಗಳಿವೆ. 2600 ಭಾಷೆ ಮಾತನಾಡುತ್ತಾರೆ. 40 ಶ್ರೇಷ್ಠ ಭಾಷೆಗಳಲ್ಲಿ ಕನ್ನಡ 27ನೇ ಸ್ಥಾನದಲ್ಲಿದೆ. ಹಾಗಾಗಿ, ಹೆಚ್ಚುಗಾರಿಕೆ, ಸುಲಲಿತ, ಶ್ರೀಮಂತ ಭಾಷೆ ಕನ್ನಡವನ್ನು ಪ್ರತಿಯೊಬ್ಬರೂ ಹೃದಯದ ಭಾಷೆಯನ್ನಾಗಿ ಸ್ವೀಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸೊರಬ ನವಚೇತನ ಬುದ್ಧಿಮಾಂದ್ಯ ಶಾಲಾ ಮಕ್ಕಳು ಮತ್ತು ಆನವಟ್ಟಿ ಬಾಲಾಜಿ ನೃತ್ಯ ಶಾಲಾ ಮಕ್ಕಳಿಂದ ನೃತ್ಯ ವೈಭವ ನೆರವೇರಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಪ್ರಧಾನ ಕಾರ್ಯದರ್ಶಿ ರಮೇಶ್, ಆನವಟ್ಟಿ ಹೋಬಳಿ ಅಧ್ಯಕ್ಷ ಕಾರ್ತಿಕ್ ಸಾಹುಕಾರ್, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಖಲಂದರ್ ಸಾಬ್, ಮಾಜಿ ಜಿಪಂ ಸದಸ್ಯ ಪಾಣಿ ರಾಜಪ್ಪ, ಕೆ.ಜೆ. ಲೋಲಾಕ್ಷಮ್ಮ, ಮಹೇಶ್ ಖಾರ್ವಿ, ವಿನೋದ್ ವಾಲ್ಮೀಕಿ, ರಾಘವೇಂದ್ರ ಸೇರಿದಂತೆ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

- - -

ಕೋಟ್

ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರ ಪ್ರಾರಂಭಿಸಲು ಉದ್ದೇಶಿಸಿರುವ ಪಬ್ಲಿಕ್ ಶಾಲೆಯನ್ನು ಸಾಗರ ತಾಲೂಕಿನ ಅಣೆಕಟ್ಟು ಹಿನ್ನೀರಿನಿಂದ ಮತ್ತು ಮಳೆಗಾಲದಲ್ಲಿ ಸೊರಬ ತಾಲೂಕಿನ ದಂಡಾವತಿ, ವರದಾ ನದಿ ಪ್ರವಾಹದಿಂದ ನದಿ ದಾಟಿ ನಗರ ಮತ್ತು ಹೋಬಳಿ ಪ್ರದೇಶಗಳಿಗೆ ತೆರಳಲು ಸಾಧ್ಯವಿಲ್ಲದೇ, ದ್ವೀಪವಾಗುವ ಗ್ರಾಮಗಳಿಂದ ಆರಂಭಿಸುವುದರಿಂದ ಅಲ್ಲಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಹಳ್ಳಿಗಳಿಂದ ಯೋಜನೆಗಳು ಪ್ರಾರಂಭವಾಗುವುದರಿಂದ ಗಾಂಧೀಜಿ ಕಂಡ ಕನಸ್ಸು ನನಸಾಗುತ್ತದೆ

- ಕೆ.ಪಿ. ಮಾನ್ವಿ, ಸಮ್ಮೇಳನಾಧ್ಯಕ್ಷೆ

- - - -05ಕೆಪಿಸೊರಬ01: ಸೊರಬ ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಜಿಲ್ಲಾ 18ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿದ್ಯಾರ್ಥಿನಿ ಆರ್. ವೈಷ್ಣವಿ ಉದ್ಘಾಟಿಸಿದರು.

Share this article