ಸರ್ಕಾರ ಡೆಂಘೀ ರೋಗಿಗಳ ಚಿಕಿತ್ಸೆಗೆ ವಿಶೇಷ ಪ್ಯಾಕೇಜ್‌ ನೀಡಲಿ: ಶಾಸಕ ಬೆಲ್ಲದ

KannadaprabhaNewsNetwork | Updated : Jul 08 2024, 09:50 AM IST
Follow Us

ಸಾರಾಂಶ

ದಿನೇ ದಿನೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಕಿಮ್ಸ್ ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

  ಹುಬ್ಬಳ್ಳಿ :   ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಕೂಡಲೇ ಈ ಪ್ರಕರಣಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿಯೇ ಆಸ್ಪತ್ರೆಗಳಿಗೆ ವಿಶೇಷ ಪ್ಯಾಕೇಜ್‌ ನೀಡಲಿ ಎಂದು ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಒತ್ತಾಯಿಸಿದರು.

ದಿನೇ ದಿನೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ಕಿಮ್ಸ್‌ಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಡೆಂಘೀಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಜ್ವರದಿಂದಾಗಿ ಚಿಕ್ಕ ಮಕ್ಕಳು ಹೆಚ್ಚಾಗಿ ನರಳುತ್ತಿದ್ದಾರೆ. ಸೊಳ್ಳೆಗಳಿಂದ ಬರುವ ರೋಗಗಳನ್ನು ತಡೆಗಟ್ಟಲು ಸರ್ಕಾರ ಹಾಗೂ ಪಾಲಿಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ. ಕಿಮ್ಸ್‌ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಈ ಕುರಿತು ಸರ್ಕಾರ ಅಗತ್ಯ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲೆಡೆಯೂ ಫಾಗಿಂಗ್ ಮತ್ತು ಔಷಧ ಸಿಂಪಡಣೆ ಕಾರ್ಯ ನಡೆಯಲಿ. ಸ್ಥಳೀಯ ಕಿಮ್ಸ್‌ನಲ್ಲಿ ಡೆಂಘೀ ಪ್ರಕರಣ ಸೇರಿದಂತೆ ಇನ್ನುಳಿದ ಎಲ್ಲ ರೋಗಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕಿಮ್ಸ್‌ನಲ್ಲಿ ಏಪ್ರಿಲ್‌ ತಿಂಗಳಿನಿಂದ ಈ ವರೆಗೆ ಡೆಂಘೀಗೆ ಒಳಗಾಗಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಅನ್ಯ ಜಿಲ್ಲೆಗಳಿಂದ ಬಂದು ಕಿಮ್ಸ್‌ನಲ್ಲಿ ದಾಖಲಾದವರು. ಕಿಮ್ಸ್‌ನಲ್ಲಿ 33 ಮಕ್ಕಳು ಹಾಗೂ 48 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ ಜಿಲ್ಲೆಗಿಂತಲೂ ಅನ್ಯ ಜಿಲ್ಲೆಗಳಿಂದ ಹೆಚ್ಚಿನ ರೋಗಿಗಳು ಕಿಮ್ಸ್‌ಗೆ ಆಗಮಿಸುತ್ತಿದ್ದಾರೆ. ಇಲ್ಲಿನ ವೈದ್ಯರು ಎಲ್ಲರಿಗೂ ಕಾಳಜಿಯಿಂದ ಚಿಕಿತ್ಸೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಲ್ಲಿಯ ವರೆಗೆ ಡೆಂಘೀಗೆ ಒಳಗಾಗಿದ್ದ 1200ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಕಿಮ್ಸ್‌ ನಿರ್ದೇಶಕರು ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣಗೊಂಡ ಸಮಯದಲ್ಲಿ ಕಿಮ್ಸ್ ಉತ್ತಮ ಕೆಲಸ ಮಾಡಿದೆ. ಈಗ ಡೆಂಘೀ ಚಿಕಿತ್ಸೆಗಾಗಿ ಕಿಮ್ಸ್ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಈ ಕೂಡಲೇ ಸಂಬಂಧಿಸಿದ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ, ಔಷಧಿಗೆ ಬೇಕಾದ ಅಗತ್ಯ ಕ್ರಮಗಳ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಸುವ ಕಾರ್ಯ ಮಾಡಲಿ ಎಂದರು.

ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಸಚಿನ ಹೊಸಕಟ್ಟಿ ಇದ್ದರು.