ಸರ್ಕಾರ ಅಯ್ಯಂಗಾರ್ ಸೇವೆಯನ್ನು ಗುರುತಿಸಲಿ: ಡಾ.ಕೆ.ಪಿ.ಹೆಗ್ಗಡೆ

KannadaprabhaNewsNetwork | Published : Feb 7, 2024 1:51 AM

ಸಾರಾಂಶ

50 ವರ್ಷಗಳ ಹಿಂದೆ ವೃತ್ತಿ ನಿಮಿತ್ತ ನಾನು ರಾಮನಗರಕ್ಕೆ ಬಂದಾಗ ಶ್ರೀಯುತರನ್ನು ಭೇಟಿಯಾಗಿದ್ದೆ. ಇಂದು 100 ವರ್ಷಗಳನ್ನು ಪೂರೈಸಿರುವ ಅಯ್ಯಂಗಾರ್ ರು ಅಂದಿನಂತೆಯೇ ಅದೇ ಉತ್ಸಾಹ-ಸ್ಪೂರ್ತಿ ಹೊಂದಿದ್ದಾರೆ. ಇಂತಹ ಮಹನೀಯರು ಇವತ್ತಿನ ಸಂಗೀತಗಾರರಿಗೆ ಆದರ್ಶ.

ಕನ್ನಡಪ್ರಭ ವಾರ್ತೆ ರಾಮನಗರ

ಸಂಗೀತ ಕ್ಷೇತ್ರದಲ್ಲಿ 70 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವಿದ್ವಾನ್ ಬಿ.ಎಸ್. ನಾರಾಯಣ ಅಯ್ಯಂಗಾರ್ ರ ಸೇವೆ ಶ್ಲಾಘನೀಯ. ಇಂತಹ ಸಾಧಕರಿಗೆ ರಾಜ್ಯಮಟ್ಟದಲ್ಲಿ ಸರ್ಕಾರ ಇಲ್ಲಿಯವರೆಗೂ ಗೌರವಿಸದಿರುವುದು ಬೇಸರದ ಸಂಗತಿ ಎಂದು ಸಮಾಜ ಸೇವಕ ಡಾ.ಕೆ.ಪಿ.ಹೆಗ್ಗಡೆ ಹೇಳಿದರು.

ನಗರದ ಐಜೂರು ಬಳಿಯ ನಾರಾಯಣ ಅಯ್ಯಂಗಾರ್ ನಿವಾಸದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ ಕಲಾ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಅಯ್ಯಂಗಾರ್ ಅವರಿಗೆ ‘ಸಂಗೀತ ರಸಋಷಿ’ ಬಿರುದು ನೀಡಿ ಅವರು ಮಾತನಾಡಿದರು.

50 ವರ್ಷಗಳ ಹಿಂದೆ ವೃತ್ತಿ ನಿಮಿತ್ತ ನಾನು ರಾಮನಗರಕ್ಕೆ ಬಂದಾಗ ಶ್ರೀಯುತರನ್ನು ಭೇಟಿಯಾಗಿದ್ದೆ. ಇಂದು 100 ವರ್ಷಗಳನ್ನು ಪೂರೈಸಿರುವ ಅಯ್ಯಂಗಾರ್ ರು ಅಂದಿನಂತೆಯೇ ಅದೇ ಉತ್ಸಾಹ-ಸ್ಪೂರ್ತಿ ಹೊಂದಿದ್ದಾರೆ. ಇಂತಹ ಮಹನೀಯರು ಇವತ್ತಿನ ಸಂಗೀತಗಾರರಿಗೆ ಆದರ್ಶ ಎಂದರು.

ವಿಶೇಷವಾಗಿ ಅವರ ಇಡೀ ಕುಟುಂಬವೇ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ಮಕ್ಕಳು ರಾಜ್ಯಮಟ್ಟದಲ್ಲಿ ವಿದ್ವಾನ್‌ಗಳಾಗಿ ಹೆಸರು ಗಳಿಸಿದ್ದಾರೆ. ಇಂತಹ ಸಂಗೀತ ಸಾಧಕರಿಗೆ ಸಂಸ್ಕೃತಿ ಸೌರಭ ಟ್ರಸ್ಟ್ ಸಂಗೀತ ರಸಋಷಿ ಬಿರುದು ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ಹೆಗ್ಗಡೆ ಬಣ್ಣಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಮಾತನಾಡಿ, ನಾರಾಯಣ ಅಯ್ಯಂಗಾರ್ ರ ಈ ಮನೆಯು ಸಂಗೀತ ದೇಗುಲದಂತೆ ಭಾಸವಾಗುತ್ತಿದೆ. ಕಳೆದ 80 ವರ್ಷಗಳಿಂದ ಸಂಗೀತ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಇಂತಹ ಮಹನೀಯರನ್ನು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಗುರುತಿಸದಿರುವುದು ತುಂಬಾ ಅನ್ಯಾಯ. ಆದರೂ ಇದ್ಯಾವುದನ್ನು ಅಪೇಕ್ಷೆ ಪಡದ ನಾರಾಯಣ ಅಯ್ಯಂಗಾರ್ ನಿಸ್ವಾರ್ಥವಾಗಿ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, ಪ್ರಚಾರ ಬಯಸದ ನಾರಾಯಣ ಅಯ್ಯಂಗಾರರದ್ದು ಮೇರು ವ್ಯಕ್ತಿತ್ವ. ಈಗಲಾದರೂ ಸರ್ಕಾರ ಇವರ ಸಾಧನೆ, ಸಂಗೀತ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ ಎಂದರು.

ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಬಿ.ನಾಗರಾಜ್ ಮಾತನಾಡಿ, 2018ರಲ್ಲಿ ನಮ್ಮ ಸಂಸ್ಥೆಯಿಂದ ರಾಜ್ಯೋತ್ಸವ ಪುರಾಸ್ಕರವನ್ನು ಶ್ರೀಯುತರಿಗೆ ನೀಡಿ ಗೌರವಿಸಿದ್ದೆವು. ಇದೀಗ ಶ್ರೀಯುತರು 100 ವರ್ಷ ಪೂರೈಸಿರುವ ಹಿನ್ನೆಲೆ ಸಂಗೀತ ರಸ-ಋಷಿ ಬಿರುದು ನೀಡಿ ಕಲಾ ಗೌರವ ಸಮರ್ಪಣೆ ಮಾಡಿರುವುದಕ್ಕೆ ನಮ್ಮ ಸಂಸ್ಥೆ ಹೆಮ್ಮೆ ಪಡುತ್ತದೆ ಎಂದು ಹೇಳಿದರು.

ಸಮಾಜ ಸೇವಕ ಶ್ರೀಧರ್ ಕ್ಯಾಸಪುರ, ರಂಗಭೂಮಿ ಕಲಾವಿದ ಎಚ್.ಎನ್.ರಮೇಶ್, ರೋಟರಿ ಮಾಜಿ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್, ವಿದ್ಯಾ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಎ.ಎಸ್.ಕೃಷ್ಣಮೂರ್ತಿ, ಅಧ್ಯಕ್ಷ ಪಿ.ವೈ.ರವೀಂದ್ರ ಹೇರ್ಳೆ, ಕಲಾವಿದ ಎಚ್. ಸುರೇಶ್, ಕರಾಟೆ ತರಬೇತುದಾರ ಎಂ. ಪ್ರಭುದಾಸ್, ರಂಗಭೂಮಿ ನಿರ್ದೇಶಕ ಎಸ್.ಸಿದ್ದರಾಜು, ರಮಣಿ ರಂಗರಾಜನ್, ಸಂಸ್ಕೃತಿ ಸೌರಭ ಟ್ರಸ್ಟ್ ಕಾರ್ಯದರ್ಶಿ ಎಚ್.ಬಿ. ಸಿದ್ದರಾಜು ಸೇರಿ ನಾರಾಯಣ ಅಯ್ಯಂಗಾರ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Share this article