ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬರಗಾಲ ಬಂದು ತಿಂಗಳುಗಳೇ ಕಳೆದಿವೆ. ರೈತರು ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ. ನಾವು ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರಗಳಿಗೆ ತಲಾ 10 ಕೋಟಿ ರು., ತುರ್ತು ಬೋರ್‌ವೆಲ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಈವರೆಗೆ ಸಮರ್ಪಕ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಶ್ವೇತಪತ್ರ ಹೊರಡಿಸಲು ಆಗ್ರಹ:ವಿಶೇಷ ಅಧಿವೇಶನ ಕರೆದು ಬರದ ಬಗ್ಗೆ ಚರ್ಚೆ ಮಾಡುವುದು ಸ್ವಾಗತಾರ್ಹ. ಆದರೆ ಚರ್ಚೆಗೂ ಮುನ್ನ ರೈತರಿಗೆ ಮತ್ತು ಜನರಿಗೆ ಸರ್ಕಾರದ ಬಳಿ ಹಣವಿದೆ, ಸರ್ಕಾರ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ಮೂಡಬೇಕು. ರಾಜ್ಯದ ಹಣಕಾಸಿನ ಪರಿಸ್ಥಿತಿ, ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಇರುವ ಬಾಕಿ, ಸರ್ಕಾರದ ಸಾಲದ ಹೊರೆ ಹಾಗೂ ಗ್ಯಾರಂಟಿಗಳ ಹಣಕಾಸಿನ ಪರಿಣಾಮ ಸೇರಿದಂತೆ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಲಿದೆ. ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ಜನರ ಜೀವನ, ಕೃಷಿ, ಮೂಲಸೌಕರ್ಯ ಮತ್ತು ಬದುಕಿಗೆ ಅತಿಯಾದ ನಿರ್ಬಂಧಗಳು ಬರುವಂತಾಗಬಾರದು. ಸ್ಥಳೀಯ ಜನರ ಬದುಕು ಮತ್ತು ಪರಿಸರ, ಇವೆರಡನ್ನೂ ಸಮತೋಲನದಲ್ಲಿ ನೋಡಬೇಕು ಎಂದು ಹೇಳಿದರು.
ಬರಗಾಲ ಮತ್ತು ಕಸ್ತೂರಿ ರಂಗನ್ ವರದಿಯಂತಹ ಮಹತ್ವದ ಎರಡು ವಿಚಾರಗಳನ್ನು ಕೇವಲ ಮೂರು ದಿನಗಳಲ್ಲಿ ಸಮಗ್ರವಾಗಿ ಚರ್ಚಿಸಲು ಸಾಧ್ಯವಿಲ್ಲ. ಸೋಮವಾರ ನಡೆಯಲಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಲಿದೆ. ಕೆಪಿಎಸ್ಸಿ ನೇಮಕಾತಿ ಕುರಿತ ಆರೋಪಗಳು, ಬಿಡದಿ ಟೌನ್‌ಶಿಪ್, ನೈಸ್ ಟೋಲ್ ಸೇರಿ ರಾಜ್ಯದ ಹಲವು ಪ್ರಮುಖ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿಯೂ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಈಗಲೂ ಬಿಜೆಪಿ ಅದೇ ನಿಲುವಿನಲ್ಲಿದೆ. ಮಲೆನಾಡಿನ ಜನರ ಹಿತಾಸಕ್ತಿ ರಕ್ಷಿಸುವುದು ನಮ್ಮ ನಿಲುವು