ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಲಿ: ಅಭಿನವ ಚೆನ್ನಬಸವ ಸ್ವಾಮೀಜಿ

KannadaprabhaNewsNetwork | Updated : Jan 10 2024, 01:19 PM IST

ಸಾರಾಂಶ

ಆಧುನಿಕ ಯುಗದಲ್ಲಿ ರೈತರು ಎಷ್ಟೇ ಕಷ್ಟ ಬಂದರೂ ಕೃಷಿ ಕ್ಷೇತ್ರ ಮರೆತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಕಷ್ಟಕ್ಕೆ ನೆರವಾಗಬೇಕಿದೆ ಎಂದು ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ತಿಳಿಸಿದರು.

ಹೂವಿನಹಡಗಲಿ: ಆಧುನಿಕ ಯುಗದಲ್ಲಿ ರೈತರು ಎಷ್ಟೇ ಕಷ್ಟ ಬಂದರೂ ಕೃಷಿ ಕ್ಷೇತ್ರ ಮರೆತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಕಷ್ಟಕ್ಕೆ ನೆರವಾಗಬೇಕಿದೆ ಎಂದು ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೊಟ್ನಿಕಲ್ಲು ಗ್ರಾಮದಲ್ಲಿ ಶಂಕರಲಿಂಗೇಶ್ವರ ಜಾತ್ರೆ ಪ್ರಯುಕ್ತ ಜಾನುವಾರು ಜಾತ್ರೆಗೆ ಚಾಲನೆ ನೀಡಿ ಮಾತನಾಡಿ, ದೇಶಕ್ಕೆ ಅನ್ನ ಹಾಕುವ ರೈತರಿಗೆ ಸರ್ಕಾರ ನೀರಾವರಿಯಂತಹ ಯೋಜನೆಗಳನ್ನು ಜಾರಿ ತರುವ ಮೂಲಕ ರೈತರ ನೆಮ್ಮದಿ ಜೀವನಕ್ಕೆ ದಾರಿ ಮಾಡಿಕೊಡಬೇಕಿದೆ ಎಂದರು.

ನಮ್ಮ ಬದುಕಿನಲ್ಲಿ ಎಷ್ಟೇ ಆಧುನಿಕತೆ ಬೆಳೆದಿದ್ದರೂ ಜಾನುವಾರುಗಳನ್ನು ರೈತರು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ನೋಡುತ್ತಾರೆ. ಎತ್ತುಗಳೊಂದಿಗೆ ರೈತರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ರೈತರಿಗೆ ಉತ್ತಮ ತಳಿಯ ರಾಸುಗಳು ಇಲ್ಲಿನ ಜಾತ್ರೆಯಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಿರುವ ದೇವಸ್ಥಾನ ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆಂದು ಹೇಳಿದರು.

ಗಮನ ಸೆಳೆದ ಜಾನುವಾರುಗಳ ಜಾತ್ರೆ: ಜ. 8ರಿಂದ ಮಕರ ಸಂಕ್ರಾಂತಿಯವರೆಗೆ ನಡೆಯುವ ಜಾನುವಾರುಗಳ ಜಾತ್ರೆ ಜನಮನ ಸೆಳೆಯಿತು. ದೇವಸ್ಥಾನದ ಸಮಿತಿಯವರು ರೈತರು ವಿವಿಧ ತಳಿಯ ಜಾನುವಾರುಗಳನ್ನು ಖರೀದಿ ಮಾಡಲು ಹಾಗೂ ಅವುಗಳ ಮಾಹಿತಿಯನ್ನು ಅರಿಯಲು ಅನುಕೂಲವಾಗುವಂತೆ ಒಂದೇ ಕಡೆಗೆ ಹತ್ತಾರು ತಳಿಯ ಜಾನುವಾರುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಿದ್ದಾರೆ.

ಜಾನುವಾರು ಜಾತ್ರೆಗೆ ಆಗಮಿಸಿರುವ ರೈತರು ಬಹಳಷ್ಟು ಖುಷಿಯಿಂದ ತಮ್ಮ ಜಾನುವಾರುಗಳಿಗೆ ನಾನಾ ಬಗೆಯ ಎತ್ತಿನ ಜೂಲಾ, ಗೆಜ್ಜೆ ಸರಗಳು, ಕೊರಳು ಸರ, ಜಾನುವಾರು ಕೊಡುಗಳಿಗೆ ನಾನಾ ಬಗೆಯ ಬಣ್ಣ ಹಚ್ಚಿ ಬಣ್ಣ ಬಣ್ಣದ ರಿಬ್ಬನ್‌ಗಳಿಂದ ಜಾನುವಾರುಗಳನ್ನು ಸಿಂಗರಿಸಿಕೊಂಡು ಜಾತ್ರೆಯಲ್ಲಿ ರೈತರು ಭಾಗವಹಿಸಿದ್ದಾರೆ.

ಜಾತ್ರೆಗೆ ಆಗಮಿಸುವ ಎಲ್ಲ ಜಾನುವಾರುಗಳಿಗೂ ದೇವಸ್ಥಾನಕ್ಕೆ ಸೇರಿರುವ ಜಾಗದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ದೇವಸ್ಥಾನ ಸಮಿತಿ ವ್ಯವಸ್ಥೆ ಮಾಡಿದ್ದಾರೆ.

ಜಾನುವಾರು ಜಾತ್ರೆಗೆ ರಾಣಿಬೆನ್ನೂರು, ದೇವರಗುಡ್ಡ, ಹಾವೇರಿ, ಗದಗ, ಮುಂಡರಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ತಮ್ಮ ಬೆಲೆಬಾಳುವ ಜಾನುವಾರುಗಳನ್ನು ತಂದಿದ್ದರು. ವಿವಿಧ ತಳಿಗಳ ಜಾನುವಾರುಗಳು ಲಕ್ಷದವರೆಗೂ ಬೆಲೆ ಬಾಳುವ ಜೋಡಿ ಎತ್ತುಗಳು ಆಗಮಿಸಿದ್ದವು.

ದೇವಸ್ಥಾನ ಸಮಿತಿ ಅಧ್ಯಕ್ಷ ಓಲಿ ಈಶಪ್ಪ, ಗಡ್ಡಿ ಚೆನ್ನಬಸಪ್ಪ, ಸತ್ಯನಾರಾಯಣ, ಆರ್‌. ಪ್ರಕಾಶಗೌಡ, ಜಿ. ಗುಡ್ಡಪ್ಪ, ರತ್ನಗಿರಿ ಸತ್ಯಪ್ಪ, ಧನಂಜಯರೆಡ್ಡಿ, ಅಳವಂಡಿ ಷಣ್ಮುಖಪ್ಪ, ಮರೇಗೌಡ, ಪಿ.ಕೆ.ಎಂ.ವಿಶ್ವನಂದಯ್ಯ ಸ್ವಾಮಿ, ಹೊಟ್ಟಿ ಪ್ರಕಾಶ, ಮಹೇಶ್ವರಯ್ಯ, ಸೀತಾರಾಮರೆಡ್ಡಿ, ಚಂದ್ಯಯ್ಯ ಸ್ವಾಮಿ, ಎ.ಎಂ. ಹಾಲಯ್ಯ, ಶರಣಯ್ಯ ಶಾಸ್ತ್ರಿ ಸೇರಿದಂತೆ ಇತರರಿದ್ದರು.

Share this article