ಬೀದಿ ನಾಯಿಗಳ ಉಪಟಳ ತಪ್ಪಿಸಲು ನಗರಪಾಲಿಕೆಗೆ ಮನವಿ

KannadaprabhaNewsNetwork |  
Published : Jan 10, 2024, 01:45 AM IST
ಆಯುಕ್ತರಿಗೆ ಮನವಿ ಸಲ್ಲಿಸಿದ ನಾಗರಿಕರು | Kannada Prabha

ಸಾರಾಂಶ

ಬೀದಿ ನಾಯಿಗಳ ಹಾವಳಿ ತಪ್ಪಿಸಲು ನಾಗರೀಕರ ಒತ್ತಾಯ

ಕನ್ನಡಪ್ರಭ ವಾರ್ತೆ ತುಮಕೂರು

ಬೀದಿನಾಯಿಗಳ ಹಾವಳಿಯಿಂದ ನೊಂದ ನಗರದ 3ನೇ ವಾರ್ಡ್ ನಾಗರಿಕರು ನಾಯಿಗಳ ಉಪಟಳ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿ ನಗರಪಾಲಿಕೆಯ ಆಯುಕ್ತೆ ಅಶ್ವಿಜ ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ಶಿರಾಗೇಟ್‌ನ 3ನೇ ವಾರ್ಡಿನ ನಾಗರಿಕರು ನಗರಪಾಲಿಕೆ ಕಚೇರಿಗೆ ಬಂದು ಬೀದಿನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಯುಕ್ತರ ಗಮನಕ್ಕೆ ತಂದು ನಾಯಿ ಹಾವಳಿ ನಿಯಂತ್ರಿಸಲು ಒತ್ತಾಯಿಸಿದರು.

ಮಕ್ಕಳ ಮೇಲೆ ದಾಳಿ ಮಾಡುವ ಬೀದಿನಾಯಿಗಳು, ಅವರನ್ನು ಕಚ್ಚಿ ಗಾಯಗೊಳಿಸುತ್ತವೆ. ಪ್ರತಿದಿನ ನಾಯಿ ಕಚ್ಚಿದ ಪ್ರಕರಣಗಳು ನಡೆಯುತ್ತಲೇ ಇವೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಲೇ ಇದೆ. ನಾಯಿಗಳ ಭೀತಿಯಿಂದ ನಾಗರಿಕರು ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ರಾತ್ರಿ ವೇಳೆ ಬೀದಿನಾಯಿಗಳ ಗಲಾಟೆಗೆ ಜನರ ನಿದ್ರೆ, ನೆಮ್ಮದಿ ಹಾಳಾಗಿದೆ. ಈ ಬಡಾವಣೆಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ಆಯುಕ್ತರಿಗೆ ಕೋರಿದರು.

3ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ನಾಗರಿಕರು ಜೊತೆ ಆಗಮಿಸಿ, ಬೀದಿನಾಯಿಗಳ ಸಮಸ್ಯೆ ಬಗ್ಗೆ ಆಯುಕ್ತರ ಗಮನ ಸೆಳೆದರು. ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುತ್ತವೆ. ದಿನನಿತ್ಯ ನಾಯಿ ಕಡಿತ ಪ್ರಕರಣದ ಬಗ್ಗೆ ದೂರುಗಳು ದಾಖಲಾಗುತ್ತಿವೆ.ಮಕ್ಕಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೀದಿನಾಯಿಗಳನ್ನು ಊರಿನಿಂದ ಹೊರಗೆ ಸಾಗಿಸಿ ನಾಗರಿಕರು ಸುರಕ್ಷಿತವಾಗಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬೀದಿನಾಯಿಗಳ ವಿಚಾರದಲ್ಲಿ ಪ್ರಾಣಿದಯಾ ಸಂಘದವರೂ ಸಹಕಾರ ನೀಡಿ, ನಗರದವನ್ನು ಬೀದಿ ನಾಯಿಗಳ ಹಾವಳಿಯಿಂದ ಮುಕ್ತಗೊಳಿಸಬೇಕು. ಪಾಲಿಕೆಯಿಂದ ಮಾಡುವ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕಾರ್ಯಾಚರಣೆಯಿಂದ ನಾಯಿಗಳ ನಿಯಂತ್ರಣ ಸಾಧ್ಯವಾಗಿಲ್ಲ. ನಾಯಿಗಳನ್ನು ಊರಿನಿಂದ ಹೊರಗೆ ಸಾಗಿಸುವುದೇ ಈ ಸಮಸ್ಯೆಗೆ ಪರಿಹಾರ. ಹಿಂದೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳ ಸಾಗಿಸಿ ಸಾಕಾಣಿಕೆ ಮಾಡಿ, ಆಹಾರದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಆ ಕಾರ್ಯ ಇದೂವರೆಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಲಕ್ಷ್ಮೀನರಸಿಂಹರಾಜು ಹೇಳಿದರು. ಮನವಿ ಸ್ವೀಕರಿಸಿದ ಆಯುಕ್ತೆ ಅಶ್ವಿಜ ಅವರು, ಈ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ