ಸಾಮಾಜಿಕ ನ್ಯಾಯ ಸಿಗದ ಬಗ್ಗೆ ಸರ್ಕಾರಗಳೇ ಉತ್ತರಿಸಲಿ

KannadaprabhaNewsNetwork | Published : Nov 15, 2024 12:32 AM

ಸಾರಾಂಶ

ಭಾರತದ ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯ ಜನರಿಗೆ ಲಭಿಸಿಲ್ಲ. 12ನೇ ಶತಮಾನದಲ್ಲಿ ಬಸವಣ್ಣವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದರು. ಮಹಿಳೆಯರ ಅನುಕೂಲಕ್ಕೆ 1973ರಲ್ಲಿ ಸಂವಿಧಾನದ ಕಲಂ 42ಕ್ಕೆ ತಿದ್ದುಪಡಿ ತಂದರೂ, 21ನೇ ಶತಮಾನದಲ್ಲಿ ಸಮಾನತೆ ದೊರಕಿಲ್ಲ.

ಧಾರವಾಡ:

ಪ್ರಸ್ತುತ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ. ಜನರಿಗೆ ಸಾಮಾಜಿಕ ನ್ಯಾಯ ಸಿಗದಿರುವ ಬಗ್ಗೆ ಸರ್ಕಾರಗಳೇ ಉತ್ತರಿಸಬೇಕಿದೆ ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಭವನದಲ್ಲಿ ಗುರುವಾರ ನಡೆದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯ ಜನರಿಗೆ ಲಭಿಸಿಲ್ಲ. 12ನೇ ಶತಮಾನದಲ್ಲಿ ಬಸವಣ್ಣವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದರು. ಮಹಿಳೆಯರ ಅನುಕೂಲಕ್ಕೆ 1973ರಲ್ಲಿ ಸಂವಿಧಾನದ ಕಲಂ 42ಕ್ಕೆ ತಿದ್ದುಪಡಿ ತಂದರೂ, 21ನೇ ಶತಮಾನದಲ್ಲಿ ಸಮಾನತೆ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರ ಅರಣ್ಯ ಸಂಪತ್ತು ಏನಾಗಿದೆ? ಪರಿಸರ ಏನಾಗಿದೆ? ಖನಿಜ ಸಂಪತ್ತು ಏನಾಗಿದೆ? ಇದೆಲ್ಲವೂ ಯಾವ ದೇಶಗಳ ಸ್ವತ್ತಾಗುತ್ತಿದೆ. ಇದಕ್ಕೆಲ್ಲ ಹೊಣೆ ಯಾರು ಎಂದು ಗೋಪಾಲಗೌಡರು ಪ್ರಶ್ನಿಸಿದರು. ದೇಶದಲ್ಲಿ ಲೂಟಿಕೋರರು ಹಾಗೂ ಹಾಳು ಮಾಡುವ ಸರ್ವರನ್ನೂ ಜೈಲಿಗೆ ಅಟ್ಟುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ದೇಶದ ಆಗು-ಹೋಗು, ಖನಿಜ ಸಂಪತ್ತು ಉಳಿಸುವ ಸದೃಢ ಯುವಶಕ್ತಿ ನಿರ್ಮಿಸುವ ಜವಾಬ್ದಾರಿ ಈಗಿನ ಪ್ರಾಧ್ಯಾಪಕರು, ಶಿಕ್ಷಕರ ಮೇಲಿದೆ ಎಂದರು. ಶಿಕ್ಷಕರು, ಪ್ರಾಧ್ಯಾಪಕರು ಈ ಕೆಲಸ ಮಾಡದಿದ್ದರೆ, 200 ವರ್ಷ ಆಂಗ್ಲರು ಆಳಿದಂತೆ ಭ್ರಷ್ಟ ರಾಜಕಾರಣಿಗಳು ನಮ್ಮನ್ನು ಆಳುತ್ತಾರೆಂದು ಎಚ್ಚರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಜನರನ್ನು ಅರಬ್ಬಿ ಸಮುದ್ರಕ್ಕೆ ಹಾಕಬೇಕಿದೆ ಎಂದು ಕಿಡಿಕಾರಿದರು.

ವಿ. ಗೋಪಾಲಗೌಡರ ವ್ಯಕ್ತಿತ್ವ ಪರಿಯಿಸಿದ ಹೈಕೋರ್ಟ್ ವಕೀಲ ಎಂ.ಎನ್. ಶೇಷಾದ್ರಿ, ನ್ಯಾಯಮೂರ್ತಿ ವಿ. ಗೋಪಲಗೌಡ ಅವರದು ಬಹುಮುಖ ವ್ಯಕ್ತಿತ್ವ. ಸಮಗ್ರ ಚಿಂತನಶೀಲರು. ಪ್ರತಿಕ್ಷಣವೂ ಕಾನೂನು ಜಪಿಸುವ ಜಂಗಮ. ಬಹಳಷ್ಟು ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಏರಿದ ಅವರು ಅನ್ಯಾಯ, ಅಕ್ರಮ ಸಹಿಸುತ್ತಿರಲಿಲ್ಲ. ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು, ನ್ಯಾಯ, ಧರ್ಮ ಹಾಗೂ ಸತ್ಯದ ತಳಹದಿಯ ಮೇಲೆ ಬದುಕು ಸಾಗಿಸಿದ್ದಾರೆ ಎಂದರು.

ವಿ. ಗೋಪಾಲಗೌಡರ ಜೀವನದ ಕುರಿತು ಮಾತನಾಡಿದ ರಂಜನಾ ದರ್ಗಾ, ಬಡವರಿಂದ ಶುಲ್ಕ ಪಡೆಯದೇ, ನ್ಯಾಯ ಒದಗಿಸಿರುವ ಗೋಪಾಲಗೌಡರು, ಸಾಮಾಜಿಕ ನ್ಯಾಯದ ಹರಿಕಾರರು. ಸರಳಜೀವಿ ಎಂದು 45 ವರ್ಷದ ಒಡನಾಟ ಮೆಲುಕು ಹಾಕಿದರು.

ಡಾ. ಶಾಂತಿ ನಾಯಕ, ಡಾ. ಪುರ ಧನಂಜಯ, ಡಾ. ಶ್ರೀಶೈಲ ಹುದ್ದಾರ, ಸತೀಶ ತುರಮರಿ, ಬಸವಪ್ರಭು ಹೊಸಕೇರಿ ಅನೇಕರು ಇದ್ದರು.

Share this article