ಗೃಹಸಚಿವರು ರಾಹುಲ್‌ರಂತೆ ಚಿಲ್ಲರೆ ಮಾತನಾಡುವುದು ಬಿಡಲಿ

KannadaprabhaNewsNetwork | Published : Oct 6, 2024 1:23 AM

ಸಾರಾಂಶ

ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಯಿಂದ ಬಿಜೆಪಿಗೆ ಯಾವುದೇ ಹಾನಿ ಆಗಲ್ಲ. ಇತ್ತೀಚೆಗೆ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದಿದ್ದಾಗ ಸ್ವಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಜಿಟಿಡಿ ಅವರು ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದರು.

ಹುಬ್ಬಳ್ಳಿ:

ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ನೆಲೆಸಿರುವ ಬಗ್ಗೆ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಬೇಜವಾಬ್ದಾರಿ ಹೇಳಿಕೆ ಸರಿಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೋರರು ಭಾರತಕ್ಕೆ ಬಂದಿದ್ದರು. ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ. ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿ ಎಂಬುದನ್ನು ‌ತಿಳಿದು ಮಾತನಾಡಲಿ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಹುಲ್ ಗಾಂಧಿಯಂತೆ‌ ಚಿಲ್ಲರೆಯಾಗಿ ಮಾತನಾಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ ಹೇಳಿಕೆಗೆ ಜೋಶಿ ಕಿಡಿಕಾರಿದರು.

ಕಡಿವಾಣ ಹಾಕಿದ್ದೇ ಬಿಜೆಪಿ:

ಪರಮೇಶ್ವರ ಅವರು ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನುಸುಳುಕೋರರು ಭಾರತಕ್ಕೆ ನುಗ್ಗುವುದಕ್ಕೆ ಕಡಿವಾಣ ಹಾಕಿದ್ದೇ ಬಿಜೆಪಿ ಸರ್ಕಾರ. ಆದರೆ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರು, ಹೈದ್ರಾಬಾದ್, ಮುಂಬೈ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಬಾಂಬ್ ಬ್ಲಾಸ್ಟ್‌ಗಳಾಗಿವೆ. ಅದೆಲ್ಲವನ್ನೂ ನೆನಪು ಮಾಡಿಕೊಳ್ಳಲಿ. ಬಾಂಬ್ ಬ್ಲಾಸ್ಟ್ ಆಗಲಿಕ್ಕೆ ಕಾರಣ ನುಸುಳುಕೋರರು ಎಂದು ತಿರುಗೇಟು ನೀಡಿದರು.

ಚಿಲ್ಲರೆ ಹೇಳಿಕೆ ಕೈಬಿಡಲಿ:

ಬಿಜೆಪಿ ಸರ್ಕಾರ ಬಂದ ಮೇಲೆ ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಈ ವಿಷಯದಲ್ಲಿ ನಾವು ರಾಜಕಾರಣ ಮಾಡಿಲ್ಲ. ಜಿ. ಪರಮೇಶ್ವರ್ ಅವರನ್ನು ನಾವು ಸಜ್ಜನ, ದೇಶ ಮತ್ತು ರಾಜ್ಯದ ಬಗ್ಗೆ ಕಳಕಳಿ ಇರುವವರು ಎಂದು ತಿಳಿದುಕೊಂಡಿದ್ದೇವೆ‌. ರಾಹುಲ್ ಗಾಂಧಿಯಂತೆ‌ ಚಿಲ್ಲರೆಯಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

ಯಾವುದೇ ಹಾನಿಯಾಗಲ್ಲ:

ಶಾಸಕ ಜಿ.ಟಿ. ದೇವೇಗೌಡ ಹೇಳಿಕೆಯಿಂದ ಬಿಜೆಪಿಗೆ ಯಾವುದೇ ಹಾನಿ ಆಗಲ್ಲ. ಇತ್ತೀಚೆಗೆ ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದಿದ್ದಾಗ ಸ್ವಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಜಿಟಿಡಿ ಅವರು ಮೊನ್ನೆ ಮೊನ್ನೆವರೆಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದರು. ಈಗ ಏಕಾಏಕಿ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.

ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೆ ಆದ ವಿಚಾರಧಾರೆ ಇರುತ್ತದೆ. ಆದರೆ, ತಮ್ಮ ಸ್ವಂತದ ಅಧಿಕಾರದ ಸ್ಥಾನಮಾನಕ್ಕಾಗಿ ಬಡಿದಾಡಿಕೊಳ್ಳುವವರು ಜಾಸ್ತಿಯಾಗಿದೆ. ಈಗ ಅಚಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಏನು ಘಟನಾವಳಿಗಳು ಆಗಿವೆ ಎಂಬುದನ್ನು ನೋಡಬೇಕು. ಅದು ಅವರ ಪಕ್ಷದ ಆಂತರಿಕ ವಿಚಾರ. ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಬಂದಿವೆ. ಇಂತಹ ಸಮಯದಲ್ಲಿ ಜಿ.ಟಿ. ದೇವೇಗೌಡರ ಹೇಳಿಕೆ ಸರಿಯಲ್ಲ ಎಂದರು.

ಜೋಶಿಗೆ ಪರಮೇಶ್ವರ ತಿರುಗೇಟು:

ಪಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿ ನೆಲೆಸಿರುವ ಬಗ್ಗೆ ಗೃಹಸಚಿವರು ರಾಹುಲ್ ಗಾಂಧಿಯಂತೆ‌ ಚಿಲ್ಲರೆಯಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಸಣ್ಣತನದ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ನಾವು ಮಾಡಿರುವ ಕೆಲಸಗಳನ್ನೇ ಅವರು ಮಾಡಿದರು ಎಂದು ಹೇಳಿಕೊಂಡು ತಿರುಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇಶದ ಭದ್ರತೆಗೆ ಮಹತ್ವ ಕೊಡಬೇಕು. ಯಾರ ಸರ್ಕಾರ ಇದ್ದರೂ ದೇಶ ಭದ್ರವಾಗಿ ಇರಬೇಕು ಎಂದು ಹೇಳಿದರು.

Share this article