ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಾಜದಲ್ಲಿ ಲಿಂಗಾನುಪಾತದ ಅಸಮತೋಲನ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಲು ಪಿಸಿಪಿಎನ್‍ಡಿಟಿ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನ ಆಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಪಿಸಿಪಿಎನ್‍ಡಿಟಿ ಉಪನಿರ್ದೇಶಕ ಡಾ.ವಿವೇಕ್ ದೊರೈ ಹೇಳಿದರು.ನಗರದ ಐಎಂಎ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ, ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ-1994 ಕುರಿತಾದ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ತಾಯಿ, ಸಹೋದರಿ, ಪತ್ನಿ ಹೀಗೆ ಮನೆಯ ಹೆಣ್ಣುಮಕ್ಕಳೇ ಅತ್ಯಂತ ಪ್ರೀತಿ ಪಾತ್ರರಾಗಿರುತ್ತಾರೆ. ಆದರೆ, ಹುಟ್ಟುವ ಮಗು ಹೆಣ್ಣು ಆಗಬಾರದೆಂಬುದು ಸರಿಯಲ್ಲ. ಈ ಮನಸ್ಥಿತಿ ಬದಲಾಗಬೇಕು. ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾದರೆ ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಯಾವ ಸಮಾಜದಲ್ಲಿ ಕೇವಲ ಗಂಡು ಪ್ರಾಧಾನ್ಯತೆ ಇರುತ್ತದೋ ಅಲ್ಲಿ ಆರ್ಥಿಕ, ಸಾಮಾಜಿಕ ಸೇರಿದಂತೆ ಬೆಳವಣಿಗೆ ಕುಂಠಿತ ಆಗಿರುತ್ತದೆ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಪುರುಷ- ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಹೆರಿಗೆಗೆ ಮುನ್ನ ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 ಕಾಯ್ದೆಯನ್ನು 1996ರ ಜನವರಿ 1ರಂದು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲಿಯಲ್ಲಿ ನೋಂದಾಯಿತ 118 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಪಿಸಿಪಿಎನ್‍ಡಿಟಿ ನಿಯಮ ಅನುಸಾರ ತಪಾಸಣೆ ಕೈಗೊಳ್ಳುವ ಮೂಲಕ ಕಾಯ್ದೆ ಅನುಷ್ಠಾನ ಮಾಡಲಾಗುತ್ತಿದೆ. ಗರ್ಭಿಣಿಯರು 12 ವಾರದೊಳಗೆ ಕಡ್ಡಾಯವಾಗಿ ನೋಂದಣಿ ಮತ್ತು ತಾಯಿ ಕಾರ್ಡ್ ಪಡೆಯಬೇಕು. ಆರ್‌ಸಿಎಚ್ ಪೋರ್ಟಲ್‍ನಲ್ಲಿ ಪ್ರತಿ ತಿಂಗಳು ಅಪ್‍ಡೇಟ್ ಆಗಬೇಕು. ಕಾಯ್ದೆ ಅನ್ವಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ಮಾರ್ಗಸೂಚಿಗಳನ್ನು ಅನುಸರಿಸಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ ₹10,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ಡಿ. ತಿಮ್ಮಪ್ಪ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಎಲ್ಲ ಕ್ಷೇತ್ರದಲ್ಲಿ ಸಮರ್ಥಳು. ಆದ್ದರಿಂದ ನಮ್ಮ ಮನಸ್ಥಿತಿ ಬದಲಾಗಬೇಕು. ಯಾವುದೇ ತಂತ್ರಜ್ಞಾನದ ದುರ್ಬಳಕೆ ಆಗಬಾರದು ಎಂದು ಕಿವಿಮಾತು ಹೇಳಿದರು.ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ಧನಂಜಯ ಸರ್ಜಿ ಮಾತನಾಡಿ, ಭಗವಂತನ ಸೃಷ್ಟಿ ಅತ್ಯಂತ ವಿಶೇಷವಾಗಿದ್ದು ಸ್ವಲ್ಪ ವ್ಯತ್ಯಾಸ ಮಾಡಿದರೂ ಅಸಮತೋಲನ ಉಂಟಾಗುತ್ತದೆ. ಮುಂದುವರಿದ ದೇಶಗಳು, ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ 1991 ರಲ್ಲಿ 1000 ಮಂದಿ ಪುರಷರಿಗೆ 951 ಹೆಣ್ಣು, 2001ರಲ್ಲಿ 956, 2011 ರಲ್ಲಿ 960 ಮತ್ತು 2021ರಲ್ಲಿ 1111 ಹೆಣ್ಣುಮಕ್ಕಳ ಸಂಖ್ಯೆ ವೃದ್ಧಿಯಾಗಿದೆ. ಇದಕ್ಕೆ ಕಾರಣ ಪಿಸಿಪಿಎನ್‍ಡಿಟಿ ಅನುಷ್ಠಾನ. ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ಕಾಯ್ದೆ ಕುರಿತು ಅರಿವು ಹೊಂದಿ, ಅದನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಲಿಂಗಾನುಪಾತದಲ್ಲಿ ಜಿಲ್ಲೆಯು ರಾಜ್ಯ ಸರಾಸರಿಗಿಂತ ಹೆಚ್ಚಿದೆ. ಪಿಸಿಪಿಎನ್‍ಡಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನದಿಂದ ಈ ಸಾಧನೆ ಸಾಧ್ಯವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಇದು ಸರಿಹೋಗಲು ಹೆಣ್ಣುಭ್ರೂಣ ಹತ್ಯೆ ನಿಲ್ಲಬೇಕು. ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯವಾಗಿ ಕಾಯ್ದೆ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿಸಿಪಿಎನ್‍ಡಿಟಿ ಸದಸ್ಯ ಕಾರ್ಯದರ್ಶಿ ಡಾ.ಶಿವಾನಂದ, ಸಲಹೆಗಾರ ಡಾ.ವೆಂಕಟೇಶ್ ರಾವ್, ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಐಎಂಎ ಅಧ್ಯಕ್ಷ ಡಾ.ರಮೇಶ್, ಡಾ.ಶಮಾ ಮತ್ತಿತರರು ಇದ್ದರು.- - - -2ಎಸ್‌ಎಂಜಿಕೆಪಿ02:
ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಪಿಸಿಪಿಎನ್‍ಡಿಟಿ ಉಪನಿರ್ದೇಶಕ ಡಾ.ವಿವೇಕ್ ದೊರೈ ಉದ್ಘಾಟಿಸಿದರು.