ಕನ್ನಡಪ್ರಭ ವಾರ್ತೆ ಮಧುಗಿರಿ
ನಮ್ಮ ಕನ್ನಡ ಮಾತೃಭಾಷೆಗೆ ದೊಡ್ಡ ಇತಿಹಾಸವಿದೆ. ಕನ್ನಡವನ್ನು ಮನದಾಳದಿಂದ ಪ್ರೀತಿ, ಗೌರವಿಸಿ,ಪ್ರೋತ್ಸಾಹಿಸಿ ಉಳಿಸಿ ಬೆಳಸಬೇಕು. ಕನ್ನಡ ನಮ್ಮ ಹೃದಯದಲ್ಲಿರಬೇಕು. ಅನ್ಯ ಭಾಷೆಗಳು ನಾಲಿಗೆಯ ಮೇಲಿರಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.ಶನಿವಾರ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಯ ಅಭ್ಯುದಯ ಮತ್ತು ಉಳಿವಿಗಾಗಿ ಶ್ರಮಿಸಿದ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಶಿವರಾಮ ಕಾರಂತ, ಬೇಂದ್ರೆ, ಕುವೆಂಪು, ಮಾಸ್ತಿ, ಗೋಕಾಕ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರ ಇವರು ಕನ್ನಡ ಭಾಷೆಗೆ ಹೆಚ್ಚು ಗೌರವ ತಂದು ಕೊಟ್ಟಿದ್ದು ಇವರನ್ನು ಸ್ಮರಿಸಬೇಕು. ಶ್ರೀಸಾಮಾನ್ಯರು ಆಡುವ ಕನ್ನಡವನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕುವೆಂಪುರವರ ನಾಡಗೀತೆಯಲ್ಲಿ ಕರ್ನಾಟಕದ ಇತಿಹಾಸದ ವಿಚಾರಗಳು ಪ್ರಸ್ತಾಪಗೊಂಡಿದ್ದು .ಆಳಿದ ಮಹನೀಯರ ಮುಖ್ಯ ಹೆಸರುಗಳನ್ನು ದಾಖಲಿಸುವ ನಿಟ್ಟಿನಲ್ಲಿ ಕರ್ನಾಟಕದ ಭವ್ಯ ಪರಂಪರೆಯನ್ನು ತೆರೆದಿರಿಸಿದ್ದಾರೆ ಎಂದರು.
ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ರಂಗಪ್ಪ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. 2022ರ ಸಮೀಕ್ಷೆ ಪ್ರಕಾರ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ 56 ಮಿಲಿಯನ್ ಆಗಿದೆ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತ ಸಂವಿಧಾನ ಗುರುತಿಸಿರುವ 22 ಭಾಷೆಗಳಲ್ಲಿ ಕನ್ನಡವು ಒಂದು. ಮಧುಗಿರಿಯಲ್ಲಿ ರಾಜಸ್ಥಾನದಿಂದ ಬಂದಿರುವ ಸೇಠುಗಳ ಅಂಗಡಿಗಳಲ್ಲಿ ಕನ್ನಡ ಮಾತನಾಡುವುದಿಲ್ಲ,ಇದರಿಂದ ನಮ್ಮ ಭಾಗದ ಜನತೆಗೆ ಭಾಷೆಯಿಂದ ವ್ಯವಹಾರಿಕವಾಗಿ ತೊಂದರೆಯಾಗಿದೆ. ಆದ್ದರಿಂದ ಶಾಸಕರು ಕನ್ನಡ ಭಾಷೆ ಕಲಿತು ವ್ಯವಹರಿಸಲು ಮಾರರ್ಗದರ್ಶನ ನೀಡುವ ಜೊತೆಗೆ ಎಸಿ, ತಹಸೀಲ್ದಾರ್ ಸೇಠುಗಳಿಗೆ ನೋಟಿಸ್ ನೀಡಿ ಕನ್ನಡ ರಾಜ ಮನ್ನಾರ್ ನೀತಿ ಅನುಸರಿಸಬೇಕು ಎಂದರು.ಸಮಾರಂಭದಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್, ಡಿವೈಎಸ್‌ಪಿ ಮಂಜುನಾಥ್,ತಾಪಂ ಇಓ ಲಕ್ಷ್ಮಣ್, ಫುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್, ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯರಾದ ಎಂ.ಶ್ರೀಧರ್, ಆಲೀಮ್, ಸಾದಿಕ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಿ.ನಾಗೇಶ್ ಬಾಬು, ಡಿಡಿಪಿಐ ಮಾದವರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎಸ್.ಸುರೇಶ್, ಕಸಾಪ ಅಧ್ಯಕ್ಷೆ ಸಹನ ನಾಗೇಶ್, ಬಿಇಓ ಕೆ.ಎನ್.ಹನುಮಂತರಾಯಪ್ಪ ಇತರರು ಉಪಸ್ಥಿತರಿದ್ದರು.