- ಈ ದುರಂತ ತಪ್ಪಿಸಲು ಕನ್ನಡಿಗರೆಲ್ಲಾ ಒಂದಾಗಬೇಕು । ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಕನ್ನಡ ಭಾಷೆ ನೀಡೋಣ । ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂಗ್ಲಿಷ್ ಭಾಷೆ ನಮ್ಮ ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿರುವ ದುರಂತವನ್ನು ಮತ್ತೆ ಕನ್ನಡಿಗರೆಲ್ಲ ಒಂದಾಗುವ ಮೂಲಕ ತಪ್ಪಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕರೆ ನೀಡಿದರು.
ಜಿಲ್ಲಾಡಳಿತ ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು. ಅದಕ್ಕಾಗಿ ಇಂಗ್ಲಿಷ್ ಹಾಗೂ ಹಲವು ಭಾಷೆಗಳನ್ನು ಕಲಿಯೋಣ. ವ್ಯವಹಾರಕ್ಕಾಗಿ ಅವನ್ನು ಬಳಸೋಣ. ಆದರೆ, ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳೋಣ, ಉಳಿಸೋಣ. ಬೆಳೆಸೋಣ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ನೀಡೋಣ ಎಂದು ಪ್ರತಿಪಾದಿಸಿದರು.ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ಅದ್ಭುತ ಸಾಧನೆ ಮಾಡಿದೆ. ಹಿಂದಿ ಭಾಷೆ ಬಿಟ್ಟರೆ ದೇಶದ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ ಎನ್ನುವುದು ನಮ್ಮೆಲ್ಲರ ಹೆಮ್ಮೆ, 2008ರಲ್ಲಿ ಕನ್ನಡಕ್ಕೆ ರಾಷ್ಟ್ರೀಯ ಶಾಸ್ತ್ರೀಯ ಸ್ಥಾನಮಾನದ ಅಭಿಮಾನವು ನಮ್ಮದೇ. ಕೇವಲ ಬೆರಳೆಣಿಕೆಯಷ್ಟು ಭಾಷೆಗಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವುದು ನಮ್ಮ ಭಾಷೆ ಮಹತ್ವ ಎಂತಹದು ಎನ್ನುವುದನ್ನು ಸಾರುತ್ತದೆ ಎಂದರು.
ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಾಕಾರಗಳು ವಿಶೇಷ ಮೇರುಗುಗಳನ್ನು ತಂದುಕೊಟ್ಟಿವೆ. ಕನ್ನಡದ ಜನಪದರು ಜಾನಪದ ಗೀತೆಗಳ ಮೂಲಕ ಈ ನೆಲದ ಸೊಗಡನ್ನು ಹೆಚ್ಚಿಸಿದ್ದಾರೆ. ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು ಸೌಂದರ್ಯ, ಅದರ ಅಭಿಮಾನಗಳು ಹೆಚ್ಚಾಗುವುದು. ಈ ಭಾಷೆಯನ್ನು ಸಮೃದ್ಧವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡತನ ಉಳಿಸಿಕೊಳ್ಳಲು ಕಂಕಣಬದ್ಧರಾಗೋಣ ಎಂದು ಹೇಳಿದರು.ನಮ್ಮ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಲಿಂಗತಾರತಮ್ಯ ಸರಿದೂಗಿಸುವ ಜಾತ್ಯಾತೀತವಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡ್ಡಿ, ಅತಂಕವಿಲ್ಲದೆ ವಿರೋಧಿಗಳ ನಿರಂತರ ವಿರೋಧದ ನಡುವೆಯೂ ಅತ್ಯಂತ ಸಮರ್ಪಕವಾಗಿ ಅನುಷ್ಠಾ ನಗೊಳಿಸಿರುವುದು ನಮ್ಮ ಸರ್ಕಾರದ ಬದ್ಧತೆ ಸಾರುತ್ತದೆ. ಅದಕ್ಕಾಗಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದರು ಸಹ ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೇ ಇಡೀ ರಾಜ್ಯದ ಸವಾಂಗೀಣ ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ಅದರಲ್ಲಿ ವಿಶೇಷವಾಗಿ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಶಾಸಕರಿಗೆ ತಲಾ ₹50 ಕೋಟಿಯಂತೆ ₹250 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯ ಲೋಕೋಪ ಯೋಗಿ ಇಲಾಖೆಯಲ್ಲಿ 89 ವಿವಿಧ ಕಾಮಗಾರಿಗಳಿಗೆ ಒಟ್ಟು ₹150 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.ಚಿಕ್ಕಮಗಳೂರು ನಗರದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ, ಕಡೂರಿನಲ್ಲಿ ₹16 ಕೋಟಿ ವೆಚ್ಚದಲ್ಲಿ ಪ್ರಜಾ ಸೌಧ ಕಟ್ಟಡ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಚಾಲನೆ ಯಲ್ಲಿದೆ. ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ₹7 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. "ಪೋಷಣ್ ಅಭಿಯಾನ ಯೋಜನೆ "ಅಡಿ ಆರೋಗ್ಯ ಮತ್ತು ಪೌಷ್ಠಿಕತೆ ಉತ್ತೇಜಿಸಲು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ₹1,03,288 ಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸ ಲಾಗಿದೆ. ಕೇಂದ್ರ ಸರ್ಕಾರದ ಯೋಜನೆ ಸಹ ಸಮರ್ಪಕವಾಗಿ ಅನುಷ್ಟಾನ ಮಾಡಿ ಅತಿ ಹೆಚ್ಚು ಹಣ ಖರ್ಚು ಮಾಡಿದ ಜಿಲ್ಲೆ ಎಂಬುದು ನಮ್ಮ ಹೆಮ್ಮೆ.
ಕಂದಾಯ ಇಲಾಖೆ ಪೌತಿ ಖಾತೆ ಅಂದೋಲನದಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಮೃತರ ಹೆಸರಿನಲ್ಲಿರುವ ₹22 ಸಾವಿರ ಕಂದಾಯ ಖಾತೆಗಳನ್ನು ಅವರ ಕುಟುಂಬದವರಿಗೆ ವರ್ಗಾಯಿಸಿ ಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.ಕರ್ನಾಟಕ ನಮ್ಮ ಹೆಮ್ಮೆಯ ರಾಜ್ಯ, ಕನ್ನಡ ನಮ್ಮ ಮಾತೃ ಭಾಷೆ, ಕನ್ನಡಾಂಭೆ ಮಕ್ಕಳಾದ ನಾವು ನ. 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಭೆಗೆ ಗೌರವ ಸಲ್ಲಿಸುವುದು ಮಾತ್ರವಲ್ಲ, ಕನ್ನಡದ ಭಾಷಾಭಿಮಾನ ಮೆರೆಯುತ್ತೇವೆ. ನಮ್ಮ ಭಾಷೆ, ನಮ್ಮ ಹೆಮ್ಮೆ, ಅದನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕಿರ್ತನಾ ಉಪಸ್ಥಿತರಿದ್ದರು.-- ಬಾಕ್ಸ್ --ಭದ್ರ ಬಾಲ್ಯ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಇಲಾಖೆಗಳು ಸ್ಥಬ್ಧ ಚಿತ್ರಗಳ ಮೆರವಣೆಗೆಯಲ್ಲಿ ಜಿಲ್ಲಾ ಪಂಚಾಯಿತಿಯ ಭದ್ರ ಬಾಲ್ಯ ಕಾರ್ಯಕ್ರಮದ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಿಂದ ನಿರ್ಮಿಸಿದ ಪಂಚ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ತಕ್ಕೆ ದ್ವಿತೀಯ ಬಹುಮಾನ ಹಾಗೂ ಜಿಪಂಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಿದ್ದ ಜಲ ಜೀವನ್ ಮಿಷನ್ ಯೋಜನೆಗೆ ತೃತೀಯ ಬಹುಮಾನ ಲಭಿಸಿದೆ.ಶಾಲಾ ಮಟ್ಟದಲ್ಲಿ ಭಾಗವಹಿಸಿದ ಸ್ತಬ್ಧ ಚಿತ್ರಗಳಲ್ಲಿ ಮೊದಲ ಬಹುಮಾನ ಸಾಯಿ ಏಂಜಲ್ಸ್ ಶಾಲೆಗೆ (ಅನುಭವ ಮಂಟಪ ಮಾದರಿ), ದ್ವಿತೀಯ ಬಹುಮಾನ ಕೆಪಿಎಸ್ ಶಾಲೆ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿ), ತೃತೀಯ ಬಹುಮಾನ ಜೆವಿಎಸ್ ಶಾಲೆ (ಕೆಂಪೇಗೌಡ ಮಾದರಿ) ಸ್ತಬ್ಧ ಚಿತ್ರಕ್ಕೆ ಬಹುಮಾನ ಲಭಿಸಿದೆ.ಪೆರಡ್‌ನಲ್ಲಿ ಭಾಗವಹಿಸಿದ ಗೃಹ ರಕ್ಷಕದಳದ ತುಕಡಿಗೆ ಮೊದಲ ಬಹುಮಾನ , ದ್ವಿತೀಯ ಬಹುಮಾನ ಎನ್‌ಸಿಸಿಯಲ್ಲಿ ಡಿಎಸಿಜಿ ಪಾಲಿಟೆಕ್ನಿಕ್, ಸೇವಾದಳ ಜಿಜಿಜೆಸಿ ಬಸವನಹಳ್ಳಿ ಶಾಲೆ, ತೃತೀಯ ಬಹುಮಾನ ಸ್ಕೌಟ್ ಆ್ಯಂಡ್ ಗೈಡ್ಸ್ ಉಪ್ಪಳ್ಳಿ ಜ್ಞಾನ ರಶ್ಮಿ ಶಾಲೆಗೆ ಅಭಿಸಿದೆ. 1 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. ಡಿಸಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಇದ್ದರು.
1 ಕೆಸಿಕೆಎಂ 2ಸ್ತಬ್ಧ ಚಿತ್ರಗಳಲ್ಲಿ ಮೊದಲ ಬಹುಮಾನ ಪಡೆದ (ಅನುಭವ ಮಂಟಪ ಮಾದರಿ) ಸಾಯಿ ಏಂಜಲ್ಸ್ ಶಾಲೆಯ ವಿದ್ಯಾರ್ಥಿಗಳು.