ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡಬೇಕು ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ ಸಲಹೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡಬೇಕು ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ‘ಕವಿ ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ವಜ್ಞ ಅವರು ಬರೆದಿರುವ ತ್ರಿಪದಿ ಪದ್ಯಗಳು ಸಾರ್ವಕಾಲಿಕವಾಗಿದ್ದು, ಇಂಗ್ಲೀಷ್, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಿಗೂ ಭಾಷಾಂತರಿಸಿದಲ್ಲಿ ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಲೀಲಾಕುಮಾರಿ ತೊಡಿಕಾನ ಅವರು ಹೇಳಿದರು. ತ್ರಿಪದಿಗಳ ಬ್ರಹ್ಮ, ಚಕ್ರವರ್ತಿ ಎಂಬ ಬಿರುದು ಪಡೆದಿರುವ ಸರ್ವಜ್ಞ ಅವರು ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮೂರು ಸಾಲಿನಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿರುವುದು ಶ್ಲಾಘನೀಯ ಎಂದರು. ಕುಲಾಲ/ಕುಂಬಾರ ಸಂಘದ ಮಾಜಿ ಅಧ್ಯಕ್ಷರಾದ ಎಂ.ಡಿ.ನಾಣಯ್ಯ ಮಾತನಾಡಿ ಕವಿ ಸರ್ವಜ್ಞರ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು, ಸರ್ವಜ್ಞರ ಹೆಸರಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.

ಕುಲಾಲ ಕುಂಬಾರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಮಾತನಾಡಿ ಸಾಲ ಕೊಳ್ಳುವಾಗ ಹೆಜ್ಜೇನು ಸವಿದಂತೆ, ಸಾಲ ನೀಡುವಾಗ ಹೆಜ್ಜೇನು ಕಡಿದಂತೆ ಎಂದು ವಿವರಿಸಿದ್ದಾರೆ ಎಂದು ಹೇಳಿದರು. ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ. ಕುಶಾಲಪ್ಪ ಮೂಲ್ಯ ಮಾತನಾಡಿ ಕವಿ ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕು ಅಂಬಲೂರು ಗ್ರಾಮದಲ್ಲಿ ಜನಿಸಿ, ಕನ್ನಡ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ ಎಂದು ಹೇಳಿದರು. ಕುಲಾಲ/ಕುಂಬಾರ ಮಹಿಳಾ ಸಂಘದ ಅಧ್ಯಕ್ಷರಾದ ಕಾಂತಿಮಣಿ, ಚಂದ್ರಶೇಖರ್ ಕುಲಾಲ, ಗಿಡ್ಡಪ್ಪ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಕಲಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸುಂಟಿಕೊಪ್ಪ ಪಿಡಿಒ ವಿ.ಜಿ.ಲೋಕೇಶ್ ನಿರೂಪಿಸಿ, ವಂದಿಸಿದರು.