ಯಲಬುರ್ಗಾ: ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ವಿಬಿಜಿ ರಾಮ್‌ಜಿ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಕೂಲಿಕಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿದರು.
ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ. ಜಾಬ್ ಕಾರ್ಡ್‌ಗಾಗಿ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಹೊಸ ಜಾಬ್ ಕಾರ್ಡ್ ವಿತರಿಸಲಾಗುವುದು ಎಂದರು.
ಗ್ರಾಮೀಣ ಭಾಗದ ರೈತರ, ಕೂಲಿಕಾರರ ಮತ್ತು ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕ ಸದೃಢಕ್ಕಾಗಿ ಜಾರಿಯಾದ ವಿಬಿ ಜಿರಾಮ್‌ಜಿ ಯೋಜನೆಯಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ. ಜು.೧ರಿಂದ ಪ್ರತಿಯೊಬ್ಬ ಕೂಲಿಕಾರರಿಗೂ ₹೩೮೨ ಕೂಲಿಮೊತ್ತ ಹಾಗೂ ೧೩೫ ದಿನಗಳ ಕೆಲಸ ಸಿಗಲಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು.ಯೋಜನೆಯಡಿ ನಿರ್ದಿಷ್ಟಪಡಿಸಿದ ೩೧೮ ಕಾಮಗಾರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.