ಗದಗ: ಮಂದಿರ, ಮಸೀದಿ, ಚರ್ಚ ಕಟ್ಟಿದರೆ ನಾಳೆ ಬೀಳುತ್ತವೆ, ಬಿದ್ದ ಮೇಲೆ ಅವುಗಳನ್ನು ಮೊದಲಿಗಿಂತ ಚೆನ್ನಾಗಿ ಮರು ನಿರ್ಮಿಸಬಹುದು.ಆದರೆ, ಮಾನವನಲ್ಲಿರುವ ಮಾನವೀಯತೆಯ ಮಂದಿರ ಬಿದ್ದರೆ ಅದನ್ನು ಮರುಕಟ್ಟಲು ಸಾಧ್ಯವಿಲ್ಲ ಎಂದು ಓಂಕಾರೇಶ್ವರ ಶ್ರೀಮಠದ ಫಕ್ಕೀರೇಶ್ವರ ಶಿವಾಚಾರ್ಯರ ಶ್ರೀಗಳು ಹೇಳಿದರು.
ಅವರು ಗದಗ ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ದೇವರ ಹಾಗೂ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವೀಯತೆ ಎನ್ನುವ ಮಂದಿರವೇ ಶ್ರೇಷ್ಠ ಮಂದಿರವಾಗಬೇಕು. ಜಾತಿಯಿಂದ ದೂರ ಇದ್ದು ನೀತಿಯಿಂದ ಬಾಳಬೇಕು ಅಂತೆಯೇ ಶರಣ ಶರಣೀಯರು ಹಾಗೆ ಬದುಕಿದರು. ಅಂತವರ ಜೀವನ ಬದುಕು ನಮ್ಮ ಜೀವನಕ್ಕೆ ಜೀವಜಲವಾದಾಗ ಅಂತರಂಗದ ದೀಪ ಬೆಳಗುತ್ತದೆ. ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನ ಕೇಳಿ ಎಲ್ಲರೂ ಕೂಡ ಶರಣರು ಆಗಲು ಸಾಧ್ಯವೆಂದು ಹೇಳಿದರು.ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪುರ ಮಾತನಾಡಿ, ಗುಡ್ಡಾಪುರದ ದಾನಮ್ಮ ದೇವಿಯ ಪ್ರವಚನದಲ್ಲಿ ಮನುಷ್ಯ ಜೀವನದಲ್ಲಿ ಬದುಕಿಗೆ ಬೆಳಕಾಗುವಂತಹ ಎರಡು ಒಳ್ಳೆಯ ಮಾತನ್ನು ಕೇಳಬೇಕು. ರಾಮಕೃಷ್ಣ ಪರಮಹಂಸರ ಸಂಘದಿಂದ ಅವರ ಒಳ್ಳೆಯ ಮಾತಿನಿಂದ ನರೇಂದ್ರಸ್ವಾಮಿ ವಿವೇಕಾನಂದ ಆದರು. ಅದೇ ರೀತಿ ಗುರುಗೋವಿಂದರ ಮಾತಿನಿಂದ ಷರೀಫ್ ಸಾಹೇಬರು ಶಿವಯೋಗಿಯಾದರು. ಹಾನಗಲ್ ಕುಮಾರ ಶಿವಯೋಗಿಯವರ ಮಾತಿನಿಂದ ಪಂ. ಪಂಚಾಕ್ಷರಿ ಗವಾಯಿಗಳು ಪ್ರಪಂಚದ ಅಂಧ-ಅನಾಥ, ದೀನ-ದಲಿತರ ಮಕ್ಕಳಿಗೆ ಸಂಗೀತ ವಿದ್ಯೆ ಧಾರೆ ಎರೆದು ಅವರ ಬಾಳ ಬೆಳಗಿ ಸಂಗೀತ ಲೋಕದ ಋಷಿಯಾದರು. ಹಾಗೇ ದಾನಮ್ಮದೇವಿ ಗುರು ಶಾಂತವೀರ ಮಹಾಸ್ವಾಮಿಗಳ ಸೇವೆ ಮಾಡಿ ಅವರ ಎರಡು ಮಾತಿನಿಂದ ಶರಣೆ ಆದರು. ದಾನಮ್ಮನ ಬದುಕಿನ ಧ್ಯಾನದ ಬೆಳಕು ನಮ್ಮೆಲ್ಲರ ಹೃದಯಗಳನ್ನು ಬೆಳಗುವಂತಾಗಲಿ. ನಿತ್ಯ ನಡೆಯುವ ಪ್ರವಚನ ಕೇಳಿ ನಮ್ಮ ಮನಸ್ಸಿನ ಪಾಪಗಳು ಸುಟ್ಟು ಹೋಗುತ್ತವೆ. ಅಕ್ಕಮಹಾದೇವಿ ಒಳ್ಳೆಯ ಮಾತುಗಳು ಹೇಳುವಂತವರ ಸಂಘವನ್ನೇ ಕರುಣಿಸು ಚೆನ್ನಮಲ್ಲಿಕಾರ್ಜುನ ಎಂದು ಪ್ರಾರ್ಥನೆ ಮಾಡಿದ್ದಾಳೆ. ಅಕ್ಕಮಹಾದೇವಿಯಂತೆ ನಮ್ಮೆಲ್ಲರ ಜೀವನ ಆಗಲಿ ಎಂದರು.
ಕಲಬುರಗಿಯ ಸಂಗಮೇಶ್ವರ ಗವಾಯಿ ಪಾಟೀಲ ಅವರಿಂದ ಸಂಗೀತ ಸೇವೆ ಜರುಗಿತು. ತೋಂಟದಾರ್ಯ ಕರಡಿಕಲ್ ತಬಲಾ ಸಾಥ್ ನೀಡಿದರು. ವೇದಿಕೆ ಮೇಲೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಗುರು ಹಿರಿಯರು ಉಪಸ್ಥಿತರಿದ್ದರು.