ಏಸುಕ್ರಿಸ್ತನ ಶಾಂತಿಯ ಸಂದೇಶ ಎಲ್ಲೆಡೆ ಪಸರಿಸಲಿ-ಡಿಸೋಜಾ

KannadaprabhaNewsNetwork | Published : Dec 26, 2024 1:04 AM

ಸಾರಾಂಶ

ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಏಸುಕ್ರಿಸ್ತರಿಗೆ ಸಲ್ಲುತ್ತದೆ. ಜಗತ್ತಿನ ಬೆಳಕಿನ ಹಬ್ಬ, ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ ಸೇಂಟ್ ಜಾನ್ ವಿಯಾನ್ನಿ ಚರ್ಚನ ಫಾದರ್ ಫ್ರಾನ್ಸಿಸ್ ಡಿಸೋಜಾ ಹೇಳಿದರು.

ಬ್ಯಾಡಗಿ: ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಏಸುಕ್ರಿಸ್ತರಿಗೆ ಸಲ್ಲುತ್ತದೆ. ಜಗತ್ತಿನ ಬೆಳಕಿನ ಹಬ್ಬ, ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ ಸೇಂಟ್ ಜಾನ್ ವಿಯಾನ್ನಿ ಚರ್ಚನ ಫಾದರ್ ಫ್ರಾನ್ಸಿಸ್ ಡಿಸೋಜಾ ಹೇಳಿದರು.

ಪಟ್ಟಣದ ಸೇಂಟ್ ಜಾನ್ ವಿಯಾನ್ನಿ ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಯೇಸುಕ್ರಿಸ್ತರ ಜನ್ಮದಿನಾಚರಣೆ ನೆರವೇರಿಸಿ ಮಾತನಾಡಿದರು. ಸ್ವತಃ ತನ್ನನ್ನು ಚಿತ್ರ ಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಪ್ರಾರ್ಥಿಸಿದವರಲ್ಲಿ ಏಸುಕ್ರಿಸ್ತರು ಮೊದಲಿಗರು, ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನರು ಆರಾಧಿಸುವ ದೇವರಾಗಿದ್ದಾರೆ‌, ಶತ್ರುಗಳನ್ನು ಸೇರಿದಂತೆ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದುವ ಮೂಲಕ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ವಿಶ್ವದ ಮಹಾನ್ ದಾರ್ಶನಿಕ ಯೇಸುಕ್ರಿಸ್ತರು ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತ ಎಂದರು.

ವಿಶ್ವದೆಲ್ಲೆಡೆ ಪ್ರಕ್ಷುಬ್ಧ ವಾತಾವರಣ:ವಿಶ್ವದ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ರಾಜಪ್ರಭುತ್ವದಲ್ಲಿದ್ದ ಯುದ್ಧಗಳ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷ ಅಸೂಯೆಗಳ ತಾಂಡವಾಡುತ್ತಿದ್ದು ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಪ್ರತಿಪಾದಿಸಲು ಹೊರಟಿರುವ ಜನರಿದ್ದಾರೆ, ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಢನಂಬಿಕೆಗಳು ಸೇರಿಕೊಂಡು ಅಮಾಯಕರನ್ನು ಕೊಲ್ಲಲಾಗುತ್ತಿದೆ, ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಇಂದಿಗೂ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ, ಅದಕ್ಕೆ ಕಾರಣ ಜೀಸಸ್ ಅವರ ಸರಳ ಬೋಧನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು ನೆನಪಿಗೆ ಬರುತ್ತವೆ ಎಂದರು. ಈ ವೇಳೆ ಸಿಸ್ಟರ್ ನಿರ್ಮಲ, ರೂಪಾ, ಅಚಲ ಇನ್ನಿತರರಿದ್ದರು.

ಮೋಟೆಬೆನ್ನೂರಿನಲ್ಲಿ ಅದ್ಧೂರಿ ಕ್ರಿಸಮಸ್: ಶಾಂತಿ ದೇವಾಲಯ ಮೋಟೆಬೆನ್ನೂರಿನಲ್ಲಿಯೂ ಕ್ರಿಸ್ತ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಮಾತನಾಡಿದ ರೇವೆರೆಂಡ್ ಅಶೋಕ ಬಂಡಿ, ತನ್ನ ‌ಚಿಂತನೆಗಳಿಂದಲೇ ವಿಶ್ವದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸುಕ್ರಿಸ್ತನನ್ನು ನಾವೆಲ್ಲರೂ ನೆನೆಯುತ್ತಿದ್ದೇವೆ, ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆ, ನಾಗರಿಕ ಪ್ರಜ್ಞೆ, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗುತ್ತಿದೆ, ಶೋಷಿತರು ಯಾರೇ ಆಗಲಿ ಅಸಹಾಯಕರು ಯಾರೇ ಇರಲಿ ಅವರ ಸೇವೆ ಮಾತ್ರ ನಮ್ಮ ಧರ್ಮದ ಉದ್ದೇಶವಾಗಿದೆ, ಸಮಾನತೆ ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳ ಎನ್ನುವ ಔದಾರ್ಯ ಯೇಸುಕ್ರಿಸ್ತನ ಅನುಯಾಯಿಗಳಿಂದ ಇಂದಿಗೂ ಬರುತ್ತಿದ್ದು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದರು. ಇದೇ ಸಂದರ್ಣದಲ್ಲಿ ಶ್ರೀಮತಿ ಎಲಿಜಬೆತ್ ದೇವರ ವಾಕ್ಯವನ್ನು ನುಡಿದರು. ಇದೇ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸುತ್ತಾ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ವೇಳೆ ಗುರುಪುತ್ರ ಕಾಲ್ಪಲ್ ಜಾನ್ ಅಗಡಿ ಹಾಗೂ ಕುಟುಂಬದವರಿಂದ ಕೇಕನ್ನು ನೀಡಲಾಯಿತು. ಮೋಹನಪ್ಪ ಮಾಳಗಿ, ಜಾನ್ ಪುನೀತ, ಬಿ.ಎಸ್‌. ಜೀವನಕುಮಾರ, ಪ್ರಭಾಕರ ಗುಡಗೂರ, ರತ್ನಾಕರ ಪುನೀತ, ಪ್ರಕಾಶ ಮಲೇಕಾರ, ನವರಾಜ ಶಿಗ್ಗಾವಿ, ಮಾಲಾ ಗುಡಗೂರ, ಚಂದ್ರಕಾಂತಿ ಪುನೀತ, ಸಲೋಮವ್ವ ಕಾಲ್ಪಲ್ , ಪ್ರೇಮಾ ಕಾಲ್ಪಲ್, ಪ್ರೇಮಾ ಗುಡಗೂರ ಪ್ರಿಸ್ಕಲ್ಲ ಅರಳಿಕಟ್ಟಿ ಹಾಗೂ ಇನ್ನಿತರರಿದ್ದರು.

Share this article