ಗದಗ: ಶಾಸಕಾಂಗದ ಮೇಲೆ ಪರಿಣಾಮ ಬೀರುವ ಏಕೈಕ ರಂಗ ಪತ್ರಿಕಾರಂಗ. ಶಾಸಕಾಂಗದ ತಪ್ಪು ತಿದ್ದಿ ಹೇಳುವ ಅಸ್ತ್ರವಾಗಬೇಕು. ಪತ್ರಿಕೆಗಳು ಸತ್ಯ ಮರೆಮಾಚುವ ಕೆಲಸ ಮಾಡದೇ ಜನರ ಧ್ವನಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈ ಹಿಂದೆ ಪತ್ರಿಕೆಗಳು ಸ್ವಾತಂತ್ರ್ಯಹೋರಾಟದ ಧ್ವನಿಯಾಗಿದ್ದವು. ರಾಜಕೀಯ ನಿಲುವುಗಳನ್ನು ಜನರಿಗೆ ತಲುಪಿಸುವುದಾಗಿತ್ತು. ಸತ್ಯ ಸಂಗತಿ ಮರೆಮಾಚದೆ ಅಭಿವ್ಯಕ್ತಗೊಳಿಸುವುದಾಗಿತ್ತು. ಆದರೆ ಇಂದು ದೇಶದಲ್ಲಿ ಪತ್ರಿಕೋದ್ಯಮ, ಪತ್ರಿಕೋದ್ಯಮವಾಗಿ ಉಳಿದಿಲ್ಲ, ಕೆಲವು ಮಾಲೀಕರ ಕೈಯೊಳಗೆ ಪತ್ರಿಕೋದ್ಯಮವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರು, ಲಕ್ಷಾಂತರ ಲಾಭ ಪಡೆದುಕೊಳ್ಳುವವರು ಇಂದು ಮಾಧ್ಯಮಗಳ ಮಾಲೀಕರಾಗಿದ್ದಾರೆ. ಇಂಡಸ್ಟ್ರಿ ಮಾರಾಟ ಮಾಡುವ ರೀತಿಯಲ್ಲಿ ಮಾಧ್ಯಮ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿವೆ. ಇಂದು ಪತ್ರಿಕೆ, ಟಿವಿ ಮಾಧ್ಯಮಗಳ ಜತೆಗೆ ಸೋಷಿಯಲ್ ಮೀಡಿಯಾ ಪ್ರಭಾವ ಬೀರುತ್ತಿದೆ. ಪತ್ರಿಕೆಗಳು ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಪರಿಣಾಮ ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದರು.ಅವ್ವ ಸೇವಾ ಟ್ರಸ್ಟ್ ಓರ್ವ ಶ್ರೇಷ್ಠ ಮಹಿಳಾ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎನ್ನುವ ಕಲ್ಪನೆ ವಿಶಿಷ್ಟವಾಗಿದೆ. ವಿಧಾನಪರಿಷತ್‌ನಲ್ಲಿ ಕಲಾಪಗಳಲ್ಲಿ ಮಾತನಾಡಿರುವ ಸಂದೇಶಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರಕರ್ತೆ ಕೆ.ಎಚ್. ಸಾವಿತ್ರಿ ಕಾರ್ಯ ನಿರ್ವಹಿಸಿದ್ದಾರೆ. ವಿಧಾನಪರಿಷತ್ತಿನ ಆಲೋಚನಾ ಪ್ರಕ್ರಿಯೆ, ರಾಜಕೀಯ ತತ್ವ-ಸಿದ್ಧಾಂತ, ಆಲೋಚನೆ ಜನರಿಗೆ ತಿಳಿಸುವ ಮೂಲಕ ನಮ್ಮನ್ನು ಪರಿಚಯಿಸುತ್ತಿದ್ದರು. ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅತ್ಯಂತ ಬಡತನದಲ್ಲಿರುವ ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಸಲು ಅವ್ವ ಸೇವಾ ಟ್ರಸ್ಟ್ ಮೂಲಕ ಸಹಾಯ ಮಾಡಲಾಗುತ್ತಿದೆ. ಅಲ್ಲದೇ, ಹತ್ತು ಹಲವೆಡೆ ಅವ್ವ ಸೇವಾ ಟ್ರಸ್ಟ್ ಮೂಲಕ ದತ್ತಿನಿಧಿ ಸ್ಥಾಪಿಸಿ ಮಹಿಳೆಯರನ್ನು ಪ್ರೋತ್ಸಾಹಿಸುವ, ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ವೇಳೆ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ರಾಜ್ಯಮಟ್ಟದ ಮಹಿಳಾ ಪತ್ರಕರ್ತರಿಗೆ ನೀಡುವ ಮಾಧ್ಯಮ ಚೇತನ ಪ್ರಶಸ್ತಿ ಸ್ವೀಕರಿಸಿ ಪತ್ರಕರ್ತೆ ಕೆ.ಎಚ್. ಸಾವಿತ್ರಿ ಮಾತನಾಡಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ, ಸಯ್ಯದ್ ಸನಾವುಲ್ಲಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ. ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು. ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ಮೌನೇಶ ಬಡಿಗೇರ ವಂದಿಸಿದರು.