ಪರಿಸರ ಸಂರಕ್ಷಣೆಗೆ ಮುಂದಿನ ಪೀಳಿಗೆ ಮುಂದಾಗಲಿ

KannadaprabhaNewsNetwork |  
Published : Jul 10, 2025, 01:46 AM IST
ಫೋಟೊಪೈಲ್- ೯ಎಸ್ಡಿಪಿ೨- ಸಿದ್ದಾಪುರ ತಾಲೂಕಿನ ಬಿದ್ರಕಾನ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಎಚ್.ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಈಗ ಕಾಡು ಗಣನೀಯವಾಗಿ ಕಡಿಮೆಯಾಗುತ್ತಿದೆ.ಇದು ನಾಗರಿಕತೆಯೋ, ಅನಾಗರಿಕತೆಯೋ? ಅರ್ಥವಾಗುತ್ತಿಲ್ಲ

ಸಿದ್ದಾಪುರ: ಪ್ರಕೃತಿ ಕೇವಲ ಮನುಷ್ಯನಿಗಾಗಿ ಮಾತ್ರ ಇಲ್ಲ. ಅಸಂಖ್ಯಾತ ಜೀವಿಗಳು ಸರಪಣಿಯ ರೀತಿಯಲ್ಲಿ ಈ ಪರಿಸರದಲ್ಲಿವೆ. ಇಂಬಳ, ನಿಸರಿಯಂಥ ಸಣ್ಣ, ಸಣ್ಣ ಜೀವಿಗಳೂ ಪರಿಸರಕ್ಕೆ ಪೂರಕವಾಗಿವೆ. ಕಾಡು ನಾಶವಾದರೆ ಅದು ಕೇವಲ ಕಾಡಿನ ಅವನತಿ ಅಲ್ಲ. ಅದು ಮನುಕುಲದ ನಾಶ. ಈ ಕುರಿತು ವಿದ್ಯಾರ್ಥಿಗಳು ಅರಿವು ಮಾಡಿಕೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಹೇಳಿದರು.

ಅವರು ತಾಲೂಕಿನ ಬಿದ್ರಕಾನಿನ ಮಹಾತ್ಮ ಗಾಂಧಿ ಶತಾಬ್ದಿ ಸ್ಮಾರಕ ಪ್ರೌಢಶಾಲೆಯ ಸಹಕಾರದೊಂದಿಗೆ ಮಹಾಬಲ ಫೌಂಡೇಶನ್ ಹಾಗೂ ಪ್ರಯೋಗ ಸ್ವಯಂಸೇವಾ ಸಂಸ್ಥೆ ಮಂಗಳವಾರ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ಪ್ರೌಢಶಾಲೆಗೆ ಸಸ್ಯಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈಗ ಕಾಡು ಗಣನೀಯವಾಗಿ ಕಡಿಮೆಯಾಗುತ್ತಿದೆ.ಇದು ನಾಗರಿಕತೆಯೋ, ಅನಾಗರಿಕತೆಯೋ? ಅರ್ಥವಾಗುತ್ತಿಲ್ಲ. ಇಂದಿನ ಕೃಷಿ ಕ್ಷೇತ್ರದ ಮೇಲೆ ಕಾಡುಪ್ರಾಣಿಗಳ ದಾಳಿಗೆ ಮುಖ್ಯ ಕಾರಣ ಕಾಡು ನಶಿಸಿರುವದು. ನಾವು ಕಾಡು, ಪರಿಸರದ ಸಂಪನ್ಮೂಲ ಅಗತ್ಯವಿದ್ದಷ್ಟು ಬಳಸಿದಾಗ ಕಾಡು ಮತ್ತು ನಾಡು ಉಳಿಯುತ್ತದೆ. ಮುಂದಿನ ನಾಗರಿಕರಾಗುವ ಇಂದಿನ ವಿದ್ಯಾರ್ಥಿಗಳು ಪರಿಸರದ ಕುರಿತು ಕುತೂಹಲದ ಕಣ್ಣು ಹೊಂದಬೇಕು. ಇಂಥ ಕಾರ್ಯಕ್ರಮಗಳು ನೀಡುವ ಅರಿವಿನ ಮೂಲಕ ಜಾಗೃತಿ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಿ.ಆರ್.ಎಪ್.ಒ.ನರೇಂದ್ರನಾಥ್ ಕದಂ ಮಾತನಾಡಿ, ಪರಿಸರ ಒಮ್ಮೆ ಹಾಳುಗೆಡವಿದರೆ ಸರಿಪಡಿಸಲು ಎಷ್ಟೋ ಕಾಲ ಬೇಕು. ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಪರಿಸರದ ಮಹತ್ವ ತಿಳಿದುಕೊಂಡಾಗ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸಿಕೊಳ್ಳಲು ಸಾಧ್ಯ. ಕಾಡಿನ ನಾಶ, ಪರಿಸರದ ಹಾನಿಗಳ ಬಗ್ಗೆ ನೀವೇ ಸ್ವಂತ ತಿಳಿದುಕೊಂಡು, ವಿರೋಧ ವ್ಯಕ್ತಪಡಿಸಿ ಅವಶ್ಯಕತೆ ಇದ್ದಷ್ಟೇ ಪ್ರಕೃತಿಯ ಸಂಪನ್ಮೂಲ ಬಳಸಿಕೊಳ್ಳುವ ಬಗ್ಗೆ ತಿಳಿವಳಿಕೆ ಹೇಳಿ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎಂ.ಆರ್. ಭಟ್ಟ ಮಾತನಾಡಿ, ಪ್ರಕೃತಿ ಒಂದನ್ನೊಂದು ಅವಲಂಬಿಸಿಕೊಂಡ ಜೀವಜಾಲ. ಅದನ್ನು ಸಮರ್ಪಕವಾಗಿ ಉಳಿಸಿಕೊಳ್ಳುವದು ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಯ ಈಗಿನ ಕಿರಿಯರು ಆ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಪ್ರಯೋಗ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಕಾಡಿನ ಮಕ್ಕಳಾದ ನಮಗೆ ಅದರ ಕುರಿತಾದ ಆಸಕ್ತಿ, ಕುತೂಹಲ ಇರಬೇಕು. ಗ್ರಹಿಕೆಯ ಮೂಲಕ, ತಿಳಿದವರಿಂದ ಅರಿತುಕೊಳ್ಳುವ ಮೂಲಕ ಪರಿಸರದ ಉಳಿವಿಗೆ ಮುಂದಾಗಬೇಕು. ಅದು ನಾವು ಬದುಕುತ್ತಿರುವ ಭೂಮಿದೇವಿಗೆ ಸಲ್ಲಿಸುವ ಸಣ್ಣ ಋಣಸಂದಾಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಸ್. ಹೆಗಡೆ ಉಳ್ಳಾನೆ ಮನುಷ್ಯ ಸ್ವಾರ್ಥ ತೊರೆದು ಪರಿಸರದ ಉಳಿವಿಗೆ ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ. ನಾಯ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ಗಜಾನನ ಹೆಗಡೆ, ಮಹಾಬಲ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಭಟ್ ಇದ್ದರು.

ಮುಖ್ಯಾಧ್ಯಾಪಕ ಜನಾರ್ಧನ ಸಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ವಿಜಯಲಕ್ಷ್ಮೀ ವಂದಿಸಿದರು. ಶಿಕ್ಷಕಿ ಸಂಧ್ಯಾ ಶಾಸ್ತ್ರೀ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌