ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆ ತೊಲಗಲಿ: ಡಾ. ವಿ.ಕೆ. ಸಂಕನಗೌಡರ

KannadaprabhaNewsNetwork |  
Published : Nov 17, 2026, 02:30 AM IST
ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಕಸಾಪ ಭವನದಲ್ಲಿ ಜರುಗಿದ ತಾಲೂಕಿನ ಸಾಹಿತಿಗಳ ಕೃತಿ ಅವಲೋಕನ ಹಾಗೂ ಬದುಕು-ಬರಹ ಕಾರ್ಯಕ್ರಮ-14ನ್ನು ಸಾಹಿತಿ, ಖ್ಯಾತ ವೈದ್ಯ ಡಾ. ವಿ.ಕೆ. ಸಂಕನಗೌಡರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗಲೂ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆ ತೊಲಗಬೇಕು. ಮಹಿಳೆ ಮನಸ್ಸು ಮಾಡಿದರೆ ಏನನ್ನದಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗಲೂ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಭಾವನೆ ತೊಲಗಬೇಕು. ಮಹಿಳೆ ಮನಸ್ಸು ಮಾಡಿದರೆ ಏನನ್ನದಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದು ಸಾಹಿತಿ, ಖ್ಯಾತ ವೈದ್ಯ ಡಾ. ವಿ.ಕೆ. ಸಂಕನಗೌಡರ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮುಂಡರಗಿ ತಾಲೂಕಿನ ಸಾಹಿತಿಗಳ ಕೃತಿ ಅವಲೋಕನ ಹಾಗೂ ಬದುಕು-ಬರಹ ಕಾರ್ಯಕ್ರಮ-14 ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯು ಎಲ್ಲ ರಂಗಗಳಲ್ಲಿಯೂ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹೀಗಾಗಿ ನಾವು ಇಂದು ಗಂಡು, ಹೆಣ್ಣುಗಳಲ್ಲಿ ಬೇಧ, ಭಾವ ಎಣಿಸದೆ ಇಬ್ಬರನ್ನೂ ಸಮಾನವಾಗಿ ಕಾಣಬೇಕು. ಹೆಚ್ಚು ಹೆಚ್ಚು ಓದಿದಾಗ ಮಾತ್ರ ಉತ್ತಮ ಸಾಹಿತ್ಯ ರಚಿಸಲು ಮತ್ತು ಮಾತನಾಡಲು ಸಾಧ್ಯವಾಗುತ್ತದೆ. ವೀಣಾ ಪಾಟೀಲ ಅವರು ಅತಿ ಹೆಚ್ಚು ಆಸಕ್ತಿ ವಹಿಸಿ ಓದುವರಿಂದ ಅವರ ಬರವಣಿಗೆ ಶುದ್ದ ಮತ್ತು ಸಾಹಿತ್ತಿಕವಾಗಿದೆ ಎಂದರು.

ವಿಶ್ರಾಂತ ಪ್ರಾ. ಶಂಬುಲಿಂಗ ಚಿಗರಿ ವೀಣಾ ಪಾಟೀಲ ಅವರ ಬದುಕು-ಬರಹ ಕುರಿತು ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಓದುವ ಹವ್ಯಾಸದಿಂದ ದೂರ ಸರಿಯುತ್ತಿದ್ದಾರೆ. ಮನೆಯ ಉತ್ತಮ ವಾತಾವರಣ ಮತ್ತು ಪುಸ್ತಕಗಳ ಒಡನಾಟ ವ್ಯಕ್ತಿಯ ಬೌದ್ಧಿಕ ಹಾಗೂ ಸಾಂಸ್ಕೃತಿಕ ಏಳಿಗೆಗೆ ಭದ್ರ ಬುನಾದಿಯಾಗುತ್ತದೆ. ವೀಣಾ ಪಾಟೀಲ ಅವರು, ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸದೆ, ನೆಲದ ವಾಸ್ತವ, ಹಬ್ಬ-ಹರಿದಿನಗಳ ಮಹತ್ವ, ಯುವಜನತೆ ಎದುರಿಸುತ್ತಿರುವ ಸವಾಲುಗಳು ಹಾಗೂ ಕೌಟುಂಬಿಕ ಮೌಲ್ಯಗಳನ್ನು ತಮ್ಮ ಬರಹಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.

ಲೇಖಕಿ ಮೀಣಾ ಹೇಮಂತಗೌಡ ಪಾಟೀಲ ಮಾತನಾಡಿ, ಆರಂಭದಲ್ಲಿ ವೇದಿಕೆಯ ಮೇಲೆ ಮಾತನಾಡಲು ಹಿಂಜರಿಕೆಯಿತ್ತು. ಆದರೆ, ಸ್ನೇಹಿತೆಯ ಪ್ರೋತ್ಸಾಹ ಮತ್ತು ಉತ್ತಮ ವಿಷಯ ಸಂಗ್ರಹಣೆಯ ಬಲದಿಂದ ಭಯ ದೂರವಾಗಿ, ಇಂದು ರಾಜ್ಯಾದ್ಯಂತ ನೂರಾರು ಉಪನ್ಯಾಸಗಳನ್ನು ನೀಡುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಈಗಾಗಲೇ ನಾಲ್ಕು ಕೃತಿಗಳು ಪ್ರಕಟಗೊಂಡಿದ್ದು, ಬಯಲು ಬಯಲನೆ ಬಿತ್ತಿ ಸೇರಿದಂತೆ 30 ಕಥೆಗಳ ಸಂಕಲನ ಹಾಗೂ ಇನ್ನೆರಡು ಕೃತಿಗಳು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಜನಿಕಾಂತ ದೇಸಾಯಿ ಮಾತನಾಡಿ, ವೀಣಾ ಅವರು ಕನ್ನಡದ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಉತ್ತಮ ಪುಸ್ತಕ ಬರೆದು, ಅವುಗಳ ರೂಪದಲ್ಲಿ ದೊಡ್ಡ ಸಾಹಿತ್ಯಿಕ ಆಸ್ತಿಯನ್ನು ನೀಡಿದ್ದಾರೆ. ಅವರ ಈ ನಿಸ್ವಾರ್ಥ ಕನ್ನಡ ಸೇವೆ ಎಲ್ಲರೂ ಮೆಚ್ಚುವಂತದ್ದು ಎಂದರು.

ತಾಲೂಕಾ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಾಹಿತಿಗಳು ತಮ್ಮ ಬರಹಗಳ ಮೂಲಕ ಸಮಾಜದ ಎಲ್ಲಾ ಆಯಾಮಗಳನ್ನು ಸ್ಪರ್ಶಿಸುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಾವು ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಆರ್.ಎಲ್. ಪೊಲೀಸಪಾಟೀಲ, ಈಶ್ವರಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಎಂ.ಎಂ. ಹೆಬ್ಬಾಳ, ಸಿ.ಕೆ. ಗಣಪ್ಪನವರ, ಕಾಶೀನಾಥ ಬಿಳಿಮಗ್ಗದ, ಆರ್.ಕೆ. ರಾಯನಗೌಡರ, ಎಲ್ಲಪ್ಪ ಹರ್ನಾಳಗಿ, ಕೃಷ್ಣಾ ಸಾಹುಕಾರ, ಮಹೇಶ ಮೇಟಿ, ಲತಾ ಕಡ್ಡಿ, ಎಂ.ಎಸ್. ಶೀರನಹಳ್ಳಿ, ಎಸ್.ಸಿ. ಚಕ್ಕಡಿಮಠ ಸೇರಿದಂತೆ ಅನೇಕರಿದ್ದರು. ಆರ್.ವೈ. ಪಾಟೀಲ ಸ್ವಾಗತಿಸಿದರು. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಐ. ಮುಲ್ಲಾ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ