ಕೂಸಿನ ಮನೆ ಬಡವರ ಪಾಲಿನ ವರದಾನವಾಗಲಿ: ಪಂಪಾಪತಿ ಹಿರೇಮಠ

KannadaprabhaNewsNetwork | Published : Aug 26, 2024 1:37 AM

ಸಾರಾಂಶ

ಕೂಸಿನ ಮನೆಯು ಬಡವರ ಪಾಲಿನ ವರದಾನವಾಗಬೇಕು.

ಕೂಸಿನ ಮನೆಯ ಮಕ್ಕಳ ಆರೈಕೆದಾರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕೂಸಿನ ಮನೆಗೆ ಬರುವ ಮಕ್ಕಳನ್ನು ಸ್ವಂತ ತಾಯಿಯಂತೆ ಆರೈಕೆ ಮಾಡಬೇಕು. ಕೂಸಿನ ಮನೆಯು ಬಡವರ ಪಾಲಿನ ವರದಾನವಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಶ್ರಯದಲ್ಲಿ ನಡೆದ ಮೂರನೇ ಹಂತದ ಕೂಸಿನ ಮನೆಯ ಮಕ್ಕಳ ಆರೈಕೆದಾರರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೂಸಿನ ಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಭೇದ-ಭಾವ ಮಾಡದೆ ಎಲ್ಲರನ್ನು ಒಂದೇ ತಾಯಿ ಮಕ್ಕಳಂತೆ ಕಂಡು ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರ ಮೇಲಿದೆ ಎಂದರು.

ಕೂಸಿನಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದು ಆರೈಕೆದಾರರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಮಾತನಾಡಿ, ಕೂಸಿನ ಮನೆಯ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಶಿಬಿರ ಏಳು ದಿನಗಳವರೆಗೆ ನಡೆಯುತ್ತದೆ. ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. ಏಳು ದಿನವೂ ಕಡ್ಡಾಯವಾಗಿ ಹಾಜರಾಗಬೇಕು. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಮೊಬೈಲ್ ಕ್ರೆಶ್ ಸಂಸ್ಥೆಯ ಭವಾನಿ ವಿಶ್ವನಾಥ್ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ನರೇಗಾ ಸಿಬ್ಬಂದಿ ಮಂಜುನಾಥ, ವೀರಭದ್ರಗೌಡ, ಗ್ರಾಮ ಕಾಯಕ ಮಿತ್ರರು, ಮಹಿಳಾ ಕೇರ್ ಟೆಕರ್ಸ್ ಇದ್ದರು.

Share this article