ಊರು, ಕೇರಿ, ನಗರದೆಲ್ಲೆಡೆ ಗಿಡ-ಮರಗಳ ಪೋಷಣೆ ಕಡ್ಡಾಯವಾಗಲಿ

KannadaprabhaNewsNetwork | Published : Apr 2, 2024 1:06 AM

ಸಾರಾಂಶ

ಬೇಸಿಗೆಯ ಸುಡುಬಿಸಿಲ ಬೇಗೆಗೆ ಬೇಸತ್ತು, ಬಸವಳಿದ ಜನತೆಗೆ ನೆರಳಿನ ಆಸರೆ ನೀಡುತ್ತಿರುವ ನಗರದ ಜೆ.ಎಚ್. ಪಟೇಲ್ ಬಡಾವಣೆಯ ಸಾಲು ಮರಗಳು ಜನ -ಜಾನುವಾರುಗಳಿಗೆ ಪರಿಸರದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿಹೇಳುತ್ತಿವೆ. ಇಂತಹ ವಾತಾವರಣ ಊರು, ಕೇರಿ, ನಗರ, ರಾಜ್ಯ, ದೇಶ ಸೇರಿದಂತೆ ಎಲ್ಲೆಡೆ ನಿರ್ಮಾಣಗೊಂಡರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದು ಸಾಹಿತಿ ಗಂಗಾಧರ ಬಿ.ಎಲ್. ನಿಟ್ಟೂರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬೇಸಿಗೆಯ ಸುಡುಬಿಸಿಲ ಬೇಗೆಗೆ ಬೇಸತ್ತು, ಬಸವಳಿದ ಜನತೆಗೆ ನೆರಳಿನ ಆಸರೆ ನೀಡುತ್ತಿರುವ ನಗರದ ಜೆ.ಎಚ್. ಪಟೇಲ್ ಬಡಾವಣೆಯ ಸಾಲು ಮರಗಳು ಜನ -ಜಾನುವಾರುಗಳಿಗೆ ಪರಿಸರದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿಹೇಳುತ್ತಿವೆ.

ಬಡಾವಣೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಶುದ್ಧ ಆಮ್ಲಜನಕ, ನೆರಳಿನಿಂದ ಆವೃತವಾಗಿರುವ ಇಲ್ಲಿಯ ಪ್ರಶಾಂತ ವಾತಾವರಣ ಎಲ್ಲರಿಗೂ ಪರಿಸರ ಕಾಳಜಿ ಸಂದೇಶ ಸಾರುತ್ತಿದೆ. ಇಂತಹ ವಾತಾವರಣ ಊರು, ಕೇರಿ, ನಗರ, ರಾಜ್ಯ, ದೇಶ ಸೇರಿದಂತೆ ಎಲ್ಲೆಡೆ ನಿರ್ಮಾಣಗೊಂಡರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದು ಸಾಹಿತಿ ಗಂಗಾಧರ ಬಿ.ಎಲ್. ನಿಟ್ಟೂರು ಅಭಿಪ್ರಾಯಪಟ್ಟಿದ್ದಾರೆ.

ಹಸಿರೇ ಉಸಿರು ಎಂಬುದನ್ನು ಮರೆತು ಗಿಡ- ಮರಗಳಿಗೆ ಕೊಡಲಿ ಹಾಕುತ್ತಾ, ತನ್ನ ಉಸಿರನ್ನು ತಾನೇ ಬರಿದು ಮಾಡಿಕೊಳ್ಳುವ ಜೊತೆಗೆ ಇತರರ ಉಸಿರುಗಟ್ಟಿಸುವ ದುಷ್ಕೃತ್ಯಕ್ಕೆ ಕೈ ಹಾಕುತ್ತಿರುವ ಮನುಷ್ಯರಿಗೆ ಇಂತಹ ಬಡಾವಣೆಗಳು ಮಾದರಿ ಆಗಬೇಕಿದೆ. ಈಗಿನ 40 ಡಿಗ್ರಿ ಆಸುಪಾಸಿನ ಉಷ್ಣಾಂಶವನ್ನೇ ನಮ್ಮಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಮಳೆರಾಯ ಇನ್ನೂ ಮುನಿಸಿಕೊಂಡು ಉಷ್ಣಾಂಶದ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಉಂಟಾದಲ್ಲಿ ಜನ ಮತ್ತು ಜಾನುವಾರುಗಳ ಸ್ಥಿತಿ-ಗತಿ ಹೇಳತೀರದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ನೈಸರ್ಗಿಕ ಮಳೆ-ಗಾಳಿಯಿಂದ ಸಾಕಷ್ಟು ನಾಶ ಸಂಭವಿಸುವುದಿದೆ. ನೆಲ ಜರಿದು ಅರಣ್ಯದ ಸ್ವರೂಪ ಬದಲಾಗುವುದಿದೆ. ಕಡು ಬೇಸಿಗೆಯಿಂದ ತಂಪಿಲ್ಲದೇ ಕಾಡು ಒಣಗಬಹುದು. ನೆಲ ಕುಸಿಯದಂತೆ ಕಾಪಾಡುವುದರ ಮೂಲಕ ಗಾಳಿಯ ಸಂಚಾರ ಸರಾಗವಾಗಿ ಇರುವಂತೆ ಮಾಡುವಲ್ಲಿ ಮರಗಳ ಇರುವಿಕೆ ಮಹತ್ವದ್ದಾಗಿದೆ. ಕಾಡಿನ ಮರಗಳು, ಝರಿಗಳನ್ನು ಸಂರಕ್ಷಿಸುವ ಮೂಲಕ ಇಂಥ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ ಎಂದಿದ್ದಾರೆ.

- - -

ಬಾಕ್ಸ್‌ ಏನೇನು ಮಾಡಬಹುದು?

- ಹೊಸ ಬಡಾವಣೆಗಳಿಗೆ ಅನುಮತಿ ನೀಡುವ ಸಂದರ್ಭ ಪ್ರತಿ ಮುಖ್ಯ ಹಾಗೂ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲೂ ಗಿಡಗಳ ನೆಟ್ಟು ಆನಂತರವೇ ಮನೆ ನಿರ್ಮಾಣ ಮಾಡುವ ಕಾಯ್ದೆ ಜಾರಿಗೊಳಿಸಬೇಕು

- ಪ್ರತಿ ಗ್ರಾಮ ನಗರಗಳ ಮುಖ್ಯ ಹಾಗೂ ಅಡ್ದ ರಸ್ತೆಗಳಲ್ಲೂ ಸರ್ಕಾರ ಖುದ್ದಾಗಿ ಗಿಡ ನೆಡುವ ಅಭಿಯಾನ ಕೈಗೊಳ್ಳಬೇಕು

- ನೆಟ್ಟ ಸಸಿಗಳನ್ನು ವೃಕ್ಷಗಳಾಗಿಸುವವರೆಗೆ ಪೋಷಿಸಲು ಪೌರ ಕಾರ್ಮಿಕರನ್ನು ನೇಮಿಸಬೇಕು

- ಮನೆ ಮುಂದೆ ಜಾಗ ಇರುವವರು ಕನಿಷ್ಠ ಒಂದಾದರೂ ಗಿಡ ನೆಟ್ಟು ಪೋಷಿಸುವಂತೆ ವಾರ್ಡ್‌ವಾರು ಜಾಗೃತಿ ಜಾಥಾ ನಡೆಸಬೇಕು

- ಬಯಸಿದವರಿಗೆ ಅಗತ್ಯ ಸಂಖ್ಯೆಯ ಸಸಿಗಳನ್ನು ಸ್ಥಳದಲ್ಲೇ ವಿತರಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಬೇಕು

- - - -1ಕೆಡಿವಿಜಿ33ಃ:

ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆ ರಸ್ತೆಯ ಅಕ್ಕಪಕ್ಕ ಇರುವ ಸಾಲು ಮರಗಳ ಒಂದು ನೋಟ.

Share this article