ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದಲ್ಲಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲೋಕಸಭಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ದೂರಿನ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪರಿಶೀಲಿಸಿ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಅವರಿಗೆ ವರದಿ ಸಲ್ಲಿಸಿದ್ದಾರೆ.ದೂರಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಿಗೆ ನೀತಿ ಸಂಹಿತೆಯ ನೋಡೆಲ್ ಅಧಿಕಾರಿ ಜಿಪಂ ಸಿಇಒ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜುಂಜಣ್ಣ ಅವರು ಪತ್ರಕರ್ತರ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಈ ವೇಳೆಯಲ್ಲಿ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರು ಭವನದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ರಾಜಕೀಯ ಮುಖಂಡರು ಸುದ್ದಿಗೋಷ್ಠಿ ಮತ್ತು ಸಂವಾದ ನಡೆಸಿದರೆ ಆಮಿಷವೊಡ್ಡಿದಂತಲ್ಲ. ಚುನಾವಣೆ ಸಂದರ್ಭದಲ್ಲಾಗಲಿ, ಇತರೆ ಸಂದರ್ಭದಲ್ಲೂ ಅಂತಹ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ್ದರು. ವಾರ್ತಾ ಸಹಾಯಕ ನಿರ್ದೇಶಕರು ಭವನದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿರುವುದು ಹಾಗೂ ಆಮಿಷ ಒಡ್ಡಿರುವ ಬಗ್ಗೆ ಸಾಕ್ಷ್ಯಾದಾರಗಳನ್ನು ನೀಡುವಂತೆ ದೂರುದಾರರಿಗೆ ತಿಳಿಸಿದ್ದರು. ಆದರೆ, ಆತ ಯಾವುದೇ ಸಾಕ್ಷ್ಯಾ ಧಾರಗಳನ್ನು ಒದಗಿಸಿಲ್ಲ ಎಂದು ಸಹಾಯಕ ನಿರ್ದೇಶಕರು ಸಿಇಓಗೆ ವರದಿ ನೀಡಿದ್ದಾರೆ.ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ, ಸಂವಾದಗಳನ್ನು ನಡೆಸುವ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಆಮಿಷ ಒಡ್ಡುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಬಗ್ಗೆ ಕ್ರಮ ವಹಿಸಿ ಭವನವನ್ನು ವಾರ್ತಾ ಇಲಾಖೆಗೆ ವಹಿಸಿಕೊಳ್ಳಬೇಕು ಎಂಬ ದೂರನ್ನು ಚುನಾವಣಾಧಿಕಾರಿಗೆ ನೀಡಲಾಗಿತ್ತು. ಇದನ್ನು ಖಂಡಿಸಿ ರಾಜಕೀಯ ಪಕ್ಷಗಳ ಮುಖಂಡರು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಹಿರಿಯ ಪತ್ರಕರ್ತರು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.ಸೋಮವಾರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಈ ನೋಟಿಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ ಸ್ವಾತಂತ್ರ್ಯ ದಮನ ಮಾಡುವ ಯತ್ನ ಇದಾಗಿದೆ ಎಂದು ಟೀಕಿಸಿದ್ದರು.ಚಾಮರಾಜನಗರ ಪತ್ರಕರ್ತರ ಭವನದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರು ನೀಡಿದ್ದ ವ್ಯಕ್ತಿಯಿಂದ ಸಾಕ್ಷ್ಯ ಒದಗಿಸುವಂತೆ ಕೇಳಲಾಗಿತ್ತು. ಅವರು ಯಾವುದೇ ಸಾಕ್ಷ್ಯ ಒದಗಿಸದ ಹಿನ್ನೆಲೆಯಲ್ಲಿ, ಇದನ್ನು ಉಲ್ಲೇಖಿಸಿ ಮಾದರಿ ನೀತಿ ಸಂಹಿತೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.- ಜುಂಜಣ್ಣ, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಚಾಮರಾಜನಗರ.