ಉತ್ತರ ಕರ್ನಾಟಕದ ನೋವಿನ ಬಗ್ಗೆ ಬೆಂಗಳೂರಲ್ಲೂ ಚರ್ಚೆಯಾಗಲಿ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Sep 10, 2026, 02:00 AM IST
ಗದಗ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ವಿಧಾನಸಭಾಧ್ಯಕ್ಷರು, ಪರಿಷತ್ ಸಭಾಪತಿ ಹಾಗೂ ಉಪ ಸಭಾಪತಿ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತ್ರ ಚರ್ಚೆ ನಡೆಸುವ ಬದಲು ಬೆಂಗಳೂರಿನಲ್ಲಿ ನಡೆಯುವ ವಿಧಾನಸಭೆ, ವಿಪ ಅಧಿವೇಶನಗಳಲ್ಲೂ ಸಮರ್ಪಕ ಸಮಯ ಮೀಸಲಿಡಬೇಕು.

ಸದನದ ನಿರ್ಣಯಗಳ ಅನುಷ್ಠಾನಕ್ಕೆ ಸಭಾಧ್ಯಕ್ಷರು, ಸಭಾಪತಿಗಳು ಒತ್ತಡ ಹೇರಬೇಕು

ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿಕೆಕನ್ನಡಪ್ರಭ ವಾರ್ತೆ ಗದಗಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಈ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತ್ರ ಚರ್ಚೆ ನಡೆಸುವ ಬದಲು ಬೆಂಗಳೂರಿನಲ್ಲಿ ನಡೆಯುವ ವಿಧಾನಸಭೆ, ವಿಪ ಅಧಿವೇಶನಗಳಲ್ಲೂ ಸಮರ್ಪಕ ಸಮಯ ಮೀಸಲಿಡಬೇಕು. ಉಕ ಭಾಗದ ಸಮಸ್ಯೆಗಳಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ವಿಶೇಷ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಬುಧವಾರ ಸಂಜೆ ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಗದಗ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಹಾಗೂ ಉಪಸಭಾಪತಿ ಉಮಾಶ್ರೀ ಅವರ ನಾಗರಿಕ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ ಮಾತ್ರಕ್ಕೆ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಆಗುವುದಿಲ್ಲ. ಕೆಲವೊಮ್ಮೆ ಉತ್ತರ ಕರ್ನಾಟಕದ ಹೆಸರಿನಲ್ಲಿ ರೊಟ್ಟಿ, ಪಲ್ಯ ಸೇರಿದಂತೆ ಇಲ್ಲಿನ ಸಂಸ್ಕೃತಿ ಕುರಿತು ಮಾತನಾಡಲಾಗುತ್ತದೆ. ಆದರೆ, ನಮಗೆ ನಮ್ಮ ನೋವಿನ ಬಗ್ಗೆ ಚರ್ಚೆ ಬೇಕಾಗಿದೆ. ಬೆಂಗಳೂರಿನೊಂದಿಗೆ ಸಮಾನವಾಗಿ ಅಭಿವೃದ್ಧಿ ಹೊಂದುವ ಅವಕಾಶ ಉತ್ತರ ಕರ್ನಾಟಕಕ್ಕೆ ದೊರೆಯಬೇಕು.ಪ್ರಾದೇಶಿಕವಾಗಿ ಸಮಯ ಮೀಸಲಿಡಲಿ:

ಅಧಿವೇಶನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ವಿವಿಧ ಚರ್ಚೆಗಳಿಗೆ ಪ್ರಾದೇಶಿಕವಾರು ಸಮಯ ನಿಗದಿಪಡಿಸುವ ಅಗತ್ಯವಿದೆ. ಉತ್ತರ ಕರ್ನಾಟಕಕ್ಕೆ ಶೇ.25, ಹೈದರಾಬಾದ್ ಕರ್ನಾಟಕಕ್ಕೆ ಶೇ.25 ಹಾಗೂ ಕರಾವಳಿ ಮತ್ತು ಬೆಂಗಳೂರು ಭಾಗಗಳಿಗೆ ಉಳಿದ ಶೇ.50 ರಷ್ಟು ಸಮಯ ಮೀಸಲಿಡುವಂತಹ ವ್ಯವಸ್ಥೆ ರೂಪಿಸಬೇಕು. ಇದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸದನದಲ್ಲಿ ಹೆಚ್ಚಿನ ಚರ್ಚೆ ನಡೆಯಲು ಸಾಧ್ಯವಾಗುತ್ತದೆ ಎಂದರು.8 ನಿರ್ಣಯಗಳು ದಿಕ್ಸೂಚಿ:

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಈ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕುರಿತು 8 ನಿರ್ಣಯಗಳನ್ನು ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ನಿರ್ಣಯಗಳು ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಿವೆ. ಆದರೆ, ನಿರ್ಣಯ ಅಂಗೀಕರಿಸಿದ ಮಾತ್ರಕ್ಕೆ ಸರ್ಕಾರದ ಅಥವಾ ಸದನದ ಕೆಲಸ ಮುಗಿಯುವುದಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಸದನದ ನಿರ್ಣಯಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲಿಸುವ ಕೆಲಸ ನಡೆಯಬೇಕು. ನಿರ್ಣಯಗಳನ್ನು ಅನುಷ್ಠಾನಗೊಳಿಸದಿದ್ದರೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಅಧಿಕಾರವನ್ನು ಸದನದ ಅಧ್ಯಕ್ಷರು ಬಳಸಬೇಕು ಎಂದು ಆಗ್ರಹಿಸಿದರು.ಪಕ್ಷಾತೀತವಾಗಿ ಕೆಲಸ ಮಾಡಲಿ:

ಸಭಾಧ್ಯಕ್ಷ ಹಾಗೂ ಸಭಾಪತಿ ಸ್ಥಾನಗಳು ಅತ್ಯಂತ ಪರಿಣಾಮಕಾರಿ ಮತ್ತು ಪವಿತ್ರ ಹುದ್ದೆಗಳಾಗಿವೆ. ರೈತರ, ಬಡವರ, ಉತ್ತರ ಕರ್ನಾಟಕದ ಜನರ ಪರವಾಗಿ ನಿಲ್ಲಲು ಯಾರೂ ಅಡ್ಡಿಯಾಗುವುದಿಲ್ಲ. ಉತ್ತರ ಕರ್ನಾಟಕದ ಶಾಸಕರು ತಮ್ಮ ಸಮಸ್ಯೆಗಳನ್ನು ಸದನದಲ್ಲಿ ಸಮರ್ಪಕವಾಗಿ ಮಂಡಿಸಲು ಅವಕಾಶ ದೊರೆಯುತ್ತಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಅವರ ಧ್ವನಿಯನ್ನು ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಬಲಪಡಿಸಬೇಕು ಎಂದರು.

ಪಕ್ಷಾತೀತವಾಗಿ ಕರ್ತವ್ಯ:

ಬೆಂಗಳೂರು ನನ್ನ ಜನ್ಮಭೂಮಿಯಾದರೂ ಅವಳಿ ಜಿಲ್ಲೆಗಳೇ ಕರ್ಮಭೂಮಿ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಹೇಳಿದರು.

ಉಪಸಭಾಪತಿ ಉಮಾಶ್ರೀ ಮಾತನಾಡಿ, ಸಂವಿಧಾನದ ಮಾರ್ಗದರ್ಶನದಲ್ಲಿ ಈ ಉನ್ನತ ಜವಾಬ್ದಾರಿ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದರು.

ಜ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಡಾ. ನಂಜುಡಪ್ಪ ವರದಿ ಸಮಗ್ರ ಜಾರಿಯಾಗಬೇಕು ಅದಕ್ಕಾಗಿ ಇಬ್ಬರೂ ನಾಯಕರು ಗಮನ ಹರಿಸಬೇಕು ಎಂದರು.

ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಮೋಹನ ಲಿಂಬಿಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ಸಿದ್ಧಲಿಂಗೇಶ್ವರ ಪಾಟೀಲ, ಅಶೋಕ ಮಂದಾಲಿ, ಶಕುಂತಲಾ ಅಕ್ಕಿ ಮುಂತಾದವರಿದ್ದರು. ಸಮಿತಿ ಅಧ್ಯಕ್ಷ ಡಿ.ಆರ್. ಪಾಟೀಲ ಸ್ವಾಗತಿಸಿದರು. ಟಿ. ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಬಿ. ಸೋಮಕಟ್ಟಿಮಠ ನಿರೂಪಿಸಿದರು.

ಹೊರಟ್ಟಿ ಸುಳ್ಳು ಹೇಳುತ್ತಿದ್ದಾರೆ: ಜಕ್ಕಪ್ಪನವರ

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಯ ಪಾದಯಾತ್ರೆಯಲ್ಲಿ ಭಾಗವಹಿಸಿ, ತಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ಸುಳ್ಳು ಹೇಳುತ್ತಿದ್ದಾರೆ. 2020ರಲ್ಲಿ ಪ್ರತಾಪಚಂದ್ರ ಶೆಟ್ಟಿಯವರನ್ನು ಕೆಳಗಿಳಿಸಿದ್ದನ್ನು ಅವರು ಮರೆತಂತಿದೆ. ಡಿ.ಕೆ. ಶಿವಕುಮಾರ್ ಅವರ ಮನವಿಗೆ ಗೌರವ ನೀಡಿ ಹೊರಟ್ಟಿ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದರು. ಬಿಜೆಪಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಾಯಕನಹಳ್ಳಿಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಕುಷ್ಟಗಿ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ, ರೈತರ ಪಾದಯಾತ್ರೆ