ನರಗುಂದ: ಆಧುನಿಕತೆಯೋ, ಅವಶ್ಯಕತೆಯೋ ಮಕ್ಕಳ ಬೆಳವಣಿಗೆಗೆ ಪಾಲಕರು ಆದ್ಯತೆ ನೀಡದ ಸ್ಥಿತಿ ನಿರ್ಮಾಣಗೊಂಡಿದೆ. ಮಕ್ಕಳು ಮನೋರೋಗಕ್ಕೆ ಒಳಗಾಗುವಂತಾಗಿದೆ. ಆದ್ದರಿಂದ ತಂದೆ, ತಾಯಿಗಳು ಮಕ್ಕಳಿಗೆ ಸಮಯ ಮೀಸಲಿಡುವ ಜತೆಗೆ ಅವರ ಸರ್ವಾಂಗೀಣ ಬೆಳವಣಿಗೆಗೆ ಪಾತ್ರ ವಹಿಸಬೇಕು ಎಂದು ಧಾರವಾಡದ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಸಲಹೆ ಮಾಡಿದರು.
ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಲಯನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿದ ಆನಂತರ ಮಾತನಾಡಿದ ಅವರು, ಮಕ್ಕಳಿಗೆ ಮೊದಲು ಊಟ ನಂತರ ಆಟ, ಅದರ ನಂತರ ಪಾಠವಾಗಬೇಕು. ಪ್ರತಿಯೊಬ್ಬರಲ್ಲೂ ಮೊಬೈಲ್ ಗೀಳು ಹೆಚ್ಚಾಗಿದೆ. ಅದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳನ್ನು ಹೊರತರಬೇಕು. ಮಕ್ಕಳಿಗೆ ಪುಸ್ತಕದ ಗೀಳು ಹೆಚ್ಚಿಸಿ, ಮನೆಯಲ್ಲಿ ಪುಟ್ಟ ಗ್ರಂಥಾಲಯ ನಿರ್ಮಿಸಬೇಕು. ಅವರ ಆಸಕ್ತಿಗೆ ಅನುಗುಣವಾಗಿ ಪೋಷಿಸಬೇಕು. ಮಗುವಿನ ಮನಸ್ಸನ್ನು ಪ್ರತಿಯೊಬ್ಬರೂ ಅರಿಯಬೇಕು. ಪಾಲಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಕ್ಕಳು ಪಠ್ಯ, ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಓದು ಯುವಜನರಿಗೆ ಅಗತ್ಯವಿದೆ. ಮಾನಸಿಕವಾಗಿ ಸಬಲರಾಗಬೇಕು. ಸೃಜನಶೀಲ ಪ್ರತಿಭೆಗಳನ್ನು ಗುರ್ತಿಸುವ ಕೆಲಸ ನಿರಂತರ ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಸಿ. ಪಾಟೀಲ, ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಅಧಿಕಾರಿಗಳಾಗಿದ್ದಾರೆ. ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ಸಂಸ್ಥೆ ಸದಾ ಮುಂದಿದೆ ಎಂದರು. ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಮಾತನಾಡಿ, ಲಯನ್ಸ್ ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿ ವಿವರಿಸಿದರು.ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ವೈ.ಪಿ. ಕಲ್ಲನಗೌಡ್ರ ವಾರ್ಷಿಕ ವರದಿ ವಾಚಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ್, ನಿರ್ದೇಶಕ ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ಎಸ್.ಎಸ್. ಪಾಟೀಲ, ಜೆ.ವಿ. ಕಂಠಿ, ಡಾ. ಪ್ರಭು ನಂದಿ, ರಾಘವೇಂದ್ರ ಆನೆಗುಂದಿ, ವಿಜಯಕುಮಾರ ಬೇಲೇರಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೇಯಸ್ ವೆರ್ಣೇಕರ, ವಿದ್ಯಾಲಕ್ಷ್ಮಿ ಕವಲೂರ ಇದ್ದರು. ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಸ್ವಾಗತಿಸಿದರು. ಸ್ನೇಹಾ ಶಿವಪುರ, ವಿಜಯಲಕ್ಷ್ಮಿ ನೂರಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಧಾನಮಂತ್ರಿ ಶ್ರದ್ಧಾ ಪಟ್ಟಣಶೆಟ್ಟಿ ವಂದಿಸಿದರು.