ಪಂಪ್ ಸೆಟ್ ಗಳಿಗೆ ಹಗಲು ಸಮಯದಲ್ಲಿ 7 ತಾಸು ವಿದ್ಯುತ್ ಸರಬರಾಜು ಮಾಡಬೇಕು. ಪಂಪ್ ಸೆಟ್ ಗಳಿಗೆ ಸರಿಯಾಗಿ ವೋಲ್ಟೇಜ್ ಬರುತ್ತಿಲ್ಲ. ಇದರಿಂದ ಮೋಟರ್ ಗಳು ಸುಟ್ಟಿವೆ.

ಹರಪನಹಳ್ಳಿ: ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ರೈತರು ತಾಲೂಕಿನ ಪುಣಭಘಟ್ಟ ವಿದ್ಯುತ್ ಪ್ರಸರಣ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪಂಪ್ ಸೆಟ್ ಗಳಿಗೆ ಹಗಲು ಸಮಯದಲ್ಲಿ 7 ತಾಸು ವಿದ್ಯುತ್ ಸರಬರಾಜು ಮಾಡಬೇಕು. ಪಂಪ್ ಸೆಟ್ ಗಳಿಗೆ ಸರಿಯಾಗಿ ವೋಲ್ಟೇಜ್ ಬರುತ್ತಿಲ್ಲ. ಇದರಿಂದ ಮೋಟರ್ ಗಳು ಸುಟ್ಟಿವೆ. 3 ವರ್ಷಗಳಿಂದ ಅಧಿಕಾರಿಗಳು ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ ಎಂದು ರೈತರು ದೂರಿದರು. ಈ ಸಮಸ್ಯೆ ಬಗೆಹರಿಯದಿದ್ದರೆ ನಿರಂತರ ಪ್ರತಿಭಟನೆ ಮಾಡಲಾಗುವುದೆಂದು ಅಧಿಕಾರಿಗಳಿಗೆ ರೈತರು ಎಚ್ಚರಿಸಿ ಮನವಿ ಸಲ್ಲಿಸಿದರು.

ಕೆಪಿಟಿಸಿಲ್ ನೋಡಲ್‌ ಅಧಿಕಾರಿ ನೂರ್ ಅಹಮ್ಮದ್ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿ ಮಾತನಾಡಿ, 8 ಎಂಜಿಯಿಂದ 20 ಎಂಜಿವರೆಗೆ ಟ್ರಾನ್ಸ್ ಫಾರಂ ಪರಿವರ್ತನೆಯಾಗುವ ಕೆಲಸ ಜ.16ಕ್ಕೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಂತರ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ 20 ಎಂಜಿ ಟ್ರಾನ್ಸ್ ಫಾರಂ ನ್ನು ಚಾರ್ಜ ಮಾಡಲಾಗುವುದು. ಇದಕ್ಕೆಲ್ಲ ರೈತರು ಸಹಕಾರ ನೀಡಬೇಕು ಎಂದು ಕೋರಿದರು.

ಬೆಸ್ಕಾಂ ತೆಲಿಗಿ ಉಪವಿಭಾಗದ ಎಇಇ ಪಂಡಿತರಾಧ್ಯ ಮಾತನಾಡಿ, ರೈತರ ಬೇಡಿಕೆಯಂತೆ ಹಗಲು 7 ತಾಸು ವಿದ್ಯುತ್ ಪೂರೈಕೆ ಹಾಗೂ ವೋಲ್ಟೇಜ್ ಸಮಸ್ಯೆ ಇರುವುದರ ಬಗ್ಗೆ ಮನವಿ ಸಲ್ಲಿಸಿದ್ದೀರಿ, ಈ ಸ್ಟೇಷನ್ ನಲ್ಲಿ ಪರಿವರ್ತಕಗಳ ಸಾಮರ್ಥ್ಯ ಕಡಿಮೆ ಇರುವುದರಿಂದ ರೈತರ ಪಂಪ್ ಸೆಟ್ ಗಳಿಗೆ ಪೂರೈಕೆ ಮಾಡಲು ಆಗುತ್ತಿಲ್ಲ. 3 ತಿಂಗಳೊಳಗೆ ಗುಣಮಟ್ಟದ ವೋಲ್ಟೇಜ್ ನ್ನು ಯಾವುದೇ ಅಡಚಣೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ನೀಡುತ್ತೇವೆ,ಎಂದು ಹೇಳಿದರು.

ರೈತ ಮುಖಂಡ ಸಿದ್ದೇಶ್ ಮಾತನಾಡಿ, ಮೂರು ವರ್ಷಗಳಿಂದ ಇದೇ ರೀತಿ ಭರವಸೆ ನೀಡುತ್ತಾ ಬಂದಿದ್ದೀರಿ ಮುಂದಿನ ದಿನಗಳಲ್ಲಿ ಮರ್ಪಕ ವಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪ್ರಸರಣ ಮಾಡದಿದ್ದರೆ ನಿರಂತರ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಸತ್ತೂರು ಮಹಾದೇವಪ್ಪ ಮಾತನಾಡಿ, ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ, ರೈತರಿಗೆ ಈ ವರ್ಷ ಮಳೆ ಹೆಚ್ಚಾಗಿ ಬೆಳೆ ಕೈಗೆ ಸಿಕ್ಕಿಲ್ಲ, ಬೇಸಿಗೆ ಸಮಯದಲ್ಲಿ ಬೆಳೆ ಬೆಳೆಯಲು ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಬೆಳಗ್ಗಿನಿಂದಲೇ ವಿದ್ಯುತ್ ಪ್ರಸರಣ ಘಟಕಕ್ಕೆ ರೈತರು ಬಂದು ಪ್ರತಿಭಟನೆ ಮಾಡಿ ಪ್ರಸರಣ ಬಂದ್ ಮಾಡಿ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕಪ್ಪ, ಜ್ಯೋತೆಪ್ಪ, ಮಹಾದೇವಪ್ಪ, ಗೋಣೆಪ್ಪ,ಎಸ್.ಜ್ಯೋತೆಪ್ಪ,ಸುನೀಲ್, ಕೆ.ಮಂಜು,ಅಣ್ಣಪ್ಪ, ಇಂದ್ರಯ್ಯ, ಸಿದ್ದೇಶ್, ಕರಿಬಸಪ್ಪ, ಬಸವರಾಜಪ್ಪ, ಹನಮಂತಪ್ಪ, ಬಣಕಾರ್ ಸಿದ್ದಪ್ಪ, ಪ್ರಕಾಶ್, ಶೇಖರಪ್ಪ, ಅಶೋಕ್, ಇಂಜಿನಿಯರ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.