ಸಮಾಜದಲ್ಲಿ ಹೆಣ್ಣಿಗೆ ಪವಿತ್ರ ಸ್ಥಾನಮಾನಗಳಿದ್ದು ಮಹಿಳೆಯನ್ನು ಬಹಿರಂಗವಾಗಿ ದೌರ್ಜನ್ಯ ನಡೆಸುವುದು ಸರಿಯಲ್ಲ.
ಹೊಸಪೇಟೆ: ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಪೊಲೀಸರು ಹಲ್ಲೆ ಮಾಡಿದ್ದನ್ನು ಖಂಡಿಸಿ ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಆರುಂಡಿ ಸುವರ್ಣ ಮಾತನಾಡಿ, ಬಿಜೆಪಿ ಕಾರ್ಯಕರ್ತೆಯಾದ ಸುಜಾತ ಹಂಡಿ ಅವರನ್ನು ಪೊಲೀಸರು ಹಲ್ಲೆ ಮಾಡಿರುವ ಘಟನೆಯು ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಪೊಲೀಸರ ಈ ವರ್ತನೆಯೂ ಖಂಡನೀಯವಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಪವಿತ್ರ ಸ್ಥಾನಮಾನಗಳಿದ್ದು ಮಹಿಳೆಯನ್ನು ಬಹಿರಂಗವಾಗಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಈ ಕೂಡಲೇ ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಜೀವಂತ ವ್ಯಕ್ತಿಗೆ ಶ್ರದ್ಧಾಂಜಲಿಯ ಪೋಸ್ಟರ್ ಹಾಕಿರುವ ಬಿಲ್ಲವ ಸಂದೇಶ ಎಂಬುವನ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಇವರ ತೇಜೋವಧೆ ಮಾಡಲು ಶ್ರದ್ಧಾಂಜಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ದಲಿತ ಶಾಸಕಿಗೆ ಈ ರೀತಿ ಅಪಮಾನ ಮಾಡುವುದು ಖಂಡನೀಯವಾಗಿದ್ದು, ಈತನ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಈ ಎಲ್ಲ ಪ್ರಕರಣಗಳನ್ನು ಗೃಹಮಂತ್ರಿಗಳು ಕೂಲಂಕಶವಾಗಿ ತನಿಖೆ ನಡೆಸಿ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಹಿಳಾ ದೌರ್ಜನ್ಯ ಮಾಡಿದ ಪೊಲೀಸರನ್ನು ಅಮಾನತು ಮಾಡಿ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ಅಶೋಕ್ ಜೀರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಎಸ್ ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಕವಿತಾ, ಮಂಡಲ ಅಧ್ಯಕ್ಷ ಶಂಕರ ಮೇಟಿ, ಪ್ರಧಾನ ಕಾರ್ಯದರ್ಶಿಗಳಾದ ಮಧುರ ಚೆನ್ನ ಶಾಸ್ತ್ರಿ, ನಟರಾಜ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್, ಮಹಿಳಾ ಮೋರ್ಚಾದ ಉಮಾದೇವಿ, ಉಮಾ, ಮುಖಂಡರಾದ ಗೌಳಿ ರುದ್ರಪ್ಪ, ಗೌಳಿ ಬಸವರಾಜ್, ತಿರುಮಲೇಶ್, ನಾಗರತ್ನ, ಈಶ್ವರಿ, ಲಲಿತಾ, ರೇಣುಕಾ, ದೇವಿಕಾ, ಶಾರದಾ, ಲಕ್ಷ್ಮೀ ಬೇಂದ್ರೆ, ಶೋಭಾ ನಾಗರತ್ನ ಪೂಜಾರಿ ಮತ್ತಿತರರಿದ್ದರು.