ಕನ್ನಡಪ್ರಭ ವಾರ್ತೆ ಹಾಸನ
ಜೈ ಕರ್ನಾಟಕ ಸಂಘ ಬೆಳ್ಳಿಕೆರೆ ವತಿಯಿಂದ ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ಅಮೃತ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ ೨೮ರಂದು ಸಕಲೇಶಪುರ ತಾಲೂಕಿನ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನ ಜಿಲ್ಲೆಯ ಮಲೆನಾಡಿನ ಹಸಿರು ಹೊದಿಕೆಯ ನಡುವೆ ನೆಲೆಸಿರುವ ಸಕಲೇಶಪುರ ತಾಲೂಕಿನ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ರಕ್ಷಿದಿಯಲ್ಲಿ ಕಳೆದ 47 ವರ್ಷಗಳಿಂದ ಸಾಂಸ್ಕೃತಿಕ ಜಾಗೃತಿ ಬೆಳಗಿಸುತ್ತಿರುವ ಜೈ ಕರ್ನಾಟಕ ಸಂಘ ಬೆಳ್ಳಿಕೆರೆ, ಈ ವರ್ಷ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಿ ಮತ್ತೊಮ್ಮೆ ಗಮನ ಸೆಳೆದಿದೆ. ಕಲೆ, ಸಾಹಿತ್ಯ, ರಂಗಭೂಮಿ, ಸಾಕ್ಷರತೆ, ಆರೋಗ್ಯ, ಕೃಷಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಈ ಸಂಘಟನೆ, ಸಾಮಾಜಿಕ ಬದ್ಧತೆಯೊಂದಿಗೆ ಸಾಂಸ್ಕೃತಿಕ ಚಳವಳಿಯನ್ನು ರೂಪಿಸಿಕೊಂಡಿದೆ. ಸಕಲೇಶಪುರದ ಹೆಮ್ಮೆಯ ಪುತ್ರ, ರಂಗಭೂಮಿ, ಜಾನಪದ, ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಮಹಾನ್ ಮಾನವತಾವಾದಿ ಎಸ್.ಕೆ. ಕರೀಂಖಾನ್ ಅವರ “ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ”ಯನ್ನು ಸ್ಥಾಪಿಸಲಾಗಿದೆ ಎಂದರು. ಕವಿ ಸುಬ್ಬು ಹೊಲೆಯಾರ್ ಅವರ ತಾಯಿ ತಿಪ್ಪಮ್ಮ ಕೊಮಾರಯ್ಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ರಂಗಭೂಮಿ, ಜಾನಪದ ಅಥವಾ ಸಾಹಿತ್ಯ ಕ್ಷೇತ್ರದ ಜನಪರ ಸಾಧಕರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಾಲಿನ ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಅಚ್ಯುತ ಕೆ.ಜಿ.ಎಫ್ ಆಯ್ಕೆಯಾಗಿದ್ದಾರೆ. ೧೯೫೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿತೀರ್ಥದಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ಯಕ್ಷಗಾನ ಮತ್ತು ತುಳು ನಾಟಕಗಳ ಮೂಲಕ ರಂಗಭೂಮಿಯಲ್ಲಿ ತೊಡಗಿಕೊಂಡರು. ೧೯೭೫ರಲ್ಲಿ ಕೆ.ಜಿ.ಎಫ್‌ಗೆ ಬಂದು ನೆಲೆಸಿ ಅದನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡ ಅವರು, ಸಮುದಾಯ ಸಾಂಸ್ಕೃತಿಕ ಜಾಥಾಗಳಲ್ಲಿ ಸಕ್ರಿಯರಾಗಿದ್ದು, ರಂಗ ಸಂಘಟಕ, ನಿರ್ದೇಶಕ ಹಾಗೂ ನಟನಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ.ಕನ್ನಡ, ತುಳು, ತೆಲುಗು ಹಾಗೂ ತಮಿಳು ಭಾಷೆಗಳ ನಡುವೆ ಸಾಂಸ್ಕೃತಿಕ ಸೇತುವೆ ನಿರ್ಮಿಸಿದ ಅಚ್ಯುತ ಅವರು ಅನೇಕ ನಾಟಕಗಳನ್ನು ರಚಿಸಿ, ಅನುವಾದಿಸಿ ಹಾಗೂ ನಿರ್ದೇಶಿಸಿದ್ದಾರೆ. ೨೦೦೩ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿರುವ ಇವರಿಗೆ ಇದೀಗ ಸೌಹಾರ್ದ ಪ್ರಶಸ್ತಿ ಲಭಿಸುತ್ತಿದೆ. ಅಪಾರ ಪ್ರತಿಭೆ ತೋರಿದರೂ ಅಕಾಲಿಕವಾಗಿ ಅಗಲಿದ ಅಮೃತಾ ರಕ್ಷಿದಿ ಅವರ ಸ್ಮರಣಾರ್ಥ “ಅಮೃತ ಕಾವ್ಯ ಪ್ರಶಸ್ತಿಯನ್ನು ಕನ್ನಡದ ಇಬ್ಬರು ಯುವ ಸೃಜನಶೀಲರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು. ಮಧು ಕಾರಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಮೂಲದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಯುಜಿಸಿ-ನೆಟ್/ಜೆಆರ್‌ಎಫ್ ಅರ್ಹತೆ ಗಳಿಸಿದ್ದಾರೆ. ಪ್ರಸ್ತುತ ಪಿಎಚ್.ಡಿ ಅಧ್ಯಯನ ನಡೆಸುತ್ತಿರುವ ಮಧು ಕಾರಗಿ, ಶ್ರವಣ ದೋಷವನ್ನು ಮೀರಿ ಕಾವ್ಯಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಕನಸುಗಳ ಚೀಲ” ಹಾಗೂ “ತೆರೆಯದ ಬಾಗಿಲು” ಕವನ ಸಂಕಲನಗಳು ಸಾಹಿತ್ಯ ವಲಯದಲ್ಲಿ ಮೆಚ್ಚುಗೆ ಗಳಿಸಿವೆ. ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.ವಿನಯ್ ಗುಂಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಿಕ್ಕನಹಳ್ಳಿ ಮೂಲದ ಇವರು ಕನ್ನಡದಲ್ಲಿ ಎಂ.ಎ. ಪದವಿ ಪಡೆದು ಪಿಎಚ್.ಡಿ ಅಧ್ಯಯನ ನಡೆಸುತ್ತಿದ್ದಾರೆ. ಕಥೆಗಾರರಾಗಿ ಗುರುತಿಸಿಕೊಂಡಿರುವ ಇವರ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, “ಬನದ ಕರಡಿ ಮತ್ತು ಇತರ ಕಥೆಗಳು” ಸಂಕಲನ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಹ್ಲಾದ್ ಅಗಸನ ಕಟ್ಟೆ ಕಥಾ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ ಎಂದು ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ಸಾಹಿತಿ-ಸಾಮಾಜಿಕ ಕಾರ್ಯಕರ್ತೆ ಡಾ. ಎಚ್.ಎಸ್. ಅನುಪಮ ಅವರನ್ನೊಳಗೊಂಡ ಸಮಿತಿಯು ಪ್ರಶಸ್ತಿಪುರಸ್ಕೃತರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ೨೦೨೬ ಫೆಬ್ರವರಿ ೨೮ರಂದು ಶನಿವಾರ ಸಂಜೆ ಸಕಲೇಶಪುರ ತಾಲೂಕಿನ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾಹಿತ್ಯ, ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಸುಬ್ಬು ಹೊಲೆಯಾರ್ ಇತರರು ಉಪಸ್ಥಿತರಿದ್ದರು.