ಹುನ್ನಾರಗಳಿಗೆ ಜನರೇ ಕಡಿವಾಣ ಹಾಕಲಿ

KannadaprabhaNewsNetwork |  
Published : Aug 16, 2026, 04:00 AM IST
ಅಪ್ಪಾಜಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸ್ವಾತಂತ್ರ್ಯಕ್ಕಾಗಿ ಅನೇಕ ವೀರರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕೆ ಶ್ರೇಷ್ಠ ಸಂವಿಧಾನವೂ ಇದೆ. ಆದರೆ, ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ರಕ್ಷಿಸುವಲ್ಲಿ ನಾವು ಎಡವಿದ್ದೇವೆ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸ್ವಾತಂತ್ರ್ಯಕ್ಕಾಗಿ ಅನೇಕ ವೀರರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶಕ್ಕೆ ಶ್ರೇಷ್ಠ ಸಂವಿಧಾನವೂ ಇದೆ. ಆದರೆ, ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ರಕ್ಷಿಸುವಲ್ಲಿ ನಾವು ಎಡವಿದ್ದೇವೆ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುವ ಹುನ್ನಾರಗಳಿಗೆ ಜನರೇ ಕಡಿವಾಣ ಹಾಕಬೇಕು. ಸರ್ಕಾರ ಯಾವುದೇ ಇರಲಿ, ನಮ್ಮ ನಾಡಿಗೆ ಬರಗಾಲ ಬಂದಿದೆ. ಈ ಕುರಿತು ಬೇಡಿಕೆಯ ಧ್ವನಿ ಎತ್ತುವುದು ಪ್ರತಿಯೊಬ್ಬರ ಸ್ವಾತಂತ್ರ್ಯ. ಆದರೆ, ಇಂತಹ ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸೂಕ್ತ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ತಾವು ಚಿಕ್ಕವರಿದ್ದಾಗ ಮುದ್ದೇಬಿಹಾಳಕ್ಕೆ ಅಧಿಕಾರಿಗಳು ಬಂದಾಗ ತಮ್ಮ ಬೇಡಿಕೆಗಳನ್ನು ಸಲ್ಲಿಸಿ ಅವರಿಗೆ ಗೌರವ ನೀಡುವ ಸಂಪ್ರದಾಯವಿತ್ತು. ಆದರೆ ಇಂದು ಜನರ ಸೇವೆಗಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಅವರು ಸಲ್ಲಿಸುತ್ತಿರುವ ಸೇವೆಗೆ ತಕ್ಕ ಗೌರವ ನೀಡದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.

ಯುವ ಕರ್ನಾಟಕ–ಯುವ ಭಾರತ ಎಂಬುದು ನಮ್ಮ ಸರ್ಕಾರದ ಉದ್ದೇಶ. ನೀರಾವರಿಗಾಗಿ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 224 ಅಡಿಗೆ ಏರಿಸುವ ಕುರಿತು ನ್ಯಾಯಾಲಯದ ತೀರ್ಪು ಬಂದಿದ್ದರೂ ಕೇಂದ್ರ ಸರ್ಕಾರದಿಂದ ಇನ್ನೂ ಗೆಜೆಟ್ ಅಧಿಸೂಚನೆ ಹೊರಬಂದಿಲ್ಲ. ಈ ಭಾಗದ ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಭಾಗದಲ್ಲಿ ಸಮರ್ಪಕ ನೀರಾವರಿ ಸಾಧ್ಯವಾಗಲಿದೆ ಎಂದು ಹೇಳಿದರು.ಹಿಂದೆ ಸಿದ್ದರಾಮಯ್ಯ ಅವರು ತೀರ್ಮಾನ ಕೈಗೊಂಡು ಬಾಗಲಕೋಟೆ ಜಿಲ್ಲೆಯ ಮುಳುಗಡೆಯಾಗುವ ಪ್ರದೇಶಗಳಿಗೆ ಸಂಬಂಧಿಸಿದ ಭೂಸ್ವಾಧೀನ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು ₹50 ಸಾವಿರ ಕೋಟಿ ಅಂದಾಜಿನ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಾಡಿನ ಜನರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಮನವಿ ಮಾಡಿದರು.ಈ ವೇಳೆ ತಹಸೀಲ್ದಾರ್‌ ಆನಂದ ಕೋಲಾರ ಧ್ವಜಾರೋಹಣ ನೆರವೇರಿಸಿ ಪ್ರಸ್ಥಾವಿಕವಾಗಿ ಮಾತನಾಡಿದರು. ತಾಪಂ ಇಒ ಸೋಮನಗೌಡ ಬಿರಾದಾರ, ಸಿಪಿಐ ಮಹಮ್ಮದ ಫಸಿವುದ್ದಿನ, ಪಿಎಸ್ಐ ಸಂಜಯಕುಮಾರ ತಿಪ್ಪಾರಡ್ಡಿ, ಪಂಚಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಬಿಜೆಪಿ ಮುಖಂಡ ಪ್ರಭು ಕಡಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವೈ.ಎಚ್.ವಿಜಯಕರ, ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಬಿ.ಮುದ್ನೂರ ಸೇರಿ ಎಲ್ಲ ಅಧಿಕಾರಿಗಳು, ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಸ್ಥಾನ ತಪ್ಪಲು ಎಂ.ಬಿ.ಪಾಟೀಲ ಕಾರಣ
ಮಹನೀಯರ ತ್ಯಾಗ, ಬಲಿದಾನದಿಂದ ದೇಶ ಸ್ವತಂತ್ರ