ಕವಿಗಳು ಅಧ್ಯಯನಶೀಲರಾಗಲಿ: ಶರಣೇಗೌಡ

KannadaprabhaNewsNetwork | Published : Nov 25, 2024 1:00 AM

ಸಾರಾಂಶ

ಕವಿತೆಯ ರಚನಕಾರರು ಬಹಳಷ್ಟು ಅಧ್ಯಯನಶೀಲರಾಗಬೇಕು.

ಕನ್ನಡ ಸಂಭ್ರಮ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷಕನ್ನಡಪ್ರಭ ವಾರ್ತೆ ಕುಷ್ಟಗಿ

ಕವಿತೆಯ ರಚನಕಾರರು ಬಹಳಷ್ಟು ಅಧ್ಯಯನಶೀಲರಾಗಬೇಕು. ಅಂದಾಗ ಉತ್ತಮ ಕವಿತೆ ರಚನೆ ಮಾಡಲು ಸಾಧ್ಯ. ಇಂದು ಕವಿಗಳು ಜಾಗೃತಿಯ ಕವಿತೆ ರಚನೆ ಮಾಡಬೇಕಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ ಹೇಳಿದರು.

ತಾಲೂಕಿನ ಹಿರೇಮನ್ನಾಪುರ ಗ್ರಾಮದ ಗವಿಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹಿರೇಮನ್ನಾಪೂರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ ಕರ್ನಾಟಕ ಕನ್ನಡ ಸಂಭ್ರಮ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಕನ್ನಡಪರ ಹೋರಾಟಗಳನ್ನು ಕನ್ನಡಪರ ಕಾರ್ಯಕ್ರಮಗಳಾದ ಕವಿಗೋಷ್ಠಿ, ದತ್ತಿ ಉಪನ್ಯಾಸ, ಸಾಹಿತ್ಯ ಸಮ್ಮೇಳನಗಳದಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಸಾಹಿತಿಗಳನ್ನು ಗುರುತಿಸುವಂತಹ ಕೆಲಸ ಮಾಡುತ್ತಿದೆ ಎಂದರು.

ಹಿರಿಯ ಸಾಹಿತಿ ಹನಮಂತಪ್ಪ ಈಟಿಯವರ ಮಾತನಾಡಿ, ಕವಿಗಳು ರಚನೆ ಮಾಡುವಂತಹ ಕವಿತೆಗಳು ಜನ ಸಾಮಾನ್ಯರಿಗೆ ತಲುಪಬೇಕು. ಸಮಾಜದಲ್ಲಿ ಇರುವಂತಹ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯವಾಗುವಂತಹ ಕವನ ರಚಿಸಬೇಕು. ಸಮಾಜದಲ್ಲಿರುವ ಪಿಡುಗುಗಳನ್ನು ಓಡಿಸುವಂತಹ ಕೆಲಸವನ್ನು ಕವನಗಳು ಮಾಡಬೇಕು. ಅಂದಾಗ ಮಾತ್ರ ಕವಿಗೂ ಕವಿತೆಗೂ ಒಂದು ಗೌರವ ಸಿಗುತ್ತದೆ ಎಂದರು.

ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿ, ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು. ಅಂದಾಗ ಮಾತ್ರ ಕನ್ನಡ ಉಳಿಯಲು, ಬೆಳೆಯಲು ಸಾಧ್ಯ ಎಂದರು.

ಕೇಂದ್ರ ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ ಮಾತನಾಡಿದರು.

ಇದೇ ವೇಳೆ ವಾಲ್ಮೀಕಪ್ಪ ಯಕ್ಕರನಾಳ ರಚಿಸಿದ ಕಟ್ಟೋಣ ಕನ್ನಡ ಕಂಕಣ ಎಂಬ ಕೃತಿ ಹಾಗೂ ಹಿರಿಯ ಸಾಹಿತಿ ಹನಮಂತಪ್ಪ ಈಟಿಯವರು ರಚಿಸಿದ ಕಾಮನಬಿಲ್ಲು ಎಂಬ ಕೃತಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಅಕ್ಕಮಹಾದೇವಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರಯ್ಯ ಹಿರೇಮಠ, ಬುಡ್ನೇಸಾಬ ಕಲಾದಗಿ, ರವೀಂದ್ರ ಬಾಕಳೆ, ಮಹೇಶ ಮನ್ನಾಪುರ, ಮೆಹಬೂಬ, ಚೈತ್ರಾ ಚಿತ್ರಗಾರ, ಹುಸೇನಮ್ಮ ಗುಡದೂರು, ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ, ಬಾಲದಂಡಪ್ಪ ತಳವಾರ, ಕೆ. ಹುಸೇನಸಾಬ, ಎಂ.ಎಂ. ಗೊಣ್ಣಾಗರ, ನಿಂಗಪ್ಪ ಸಜ್ಜನ, ಲೆಂಕಪ್ಪ ವಾಲೀಕಾರ, ಮಂಜುನಾಥ ಗುಳೇದಗುಡ್ಡ, ತಾಜುದ್ದಿನ ದಳಪತಿ, ರಾಮೇಶ್ವರ ಡಾಣಿ, ವಿ.ಎಸ್. ಕಾಡಗಿಮಠ, ಎಸ್.ಜಿ. ಕಡೆಮನಿ, ಮಹೇಶ ಜಿ. ಎಚ್., ಶರಣಪ್ಪ ಲೈನದ್ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. 20ಕ್ಕೂ ಅಧಿಕ ಕವಿಗಳು ಕವಿತೆ ವಾಚಿಸಿದರು.

Share this article