- "ಪೊಲೀಸ್ ಚಿಣ್ಣರ ಅಂಗಳ " ಉದ್ಘಾಟಿಸಿ ಎಸ್‌ಪಿ ಉಮಾ ಪ್ರಶಾಂತ್ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಪಿ.ಜೆ. ಬಡಾವಣೆಯ ಕವಾಯಿತು ಮೈದಾನದಲ್ಲಿದ್ದ ಶಾಲೆಯನ್ನು ಪೊಲೀಸ್ ವಸತಿ ಗೃಹಗಳ ಸಮುಚ್ಛಯ ಬಳಿ ಸ್ಥಳಾಂತರಗೊಂಡಿದ್ದನ್ನು ಉದ್ಘಾಟಿಸಿ ಮಾತನಾಡಿದ ಅವರು, "ಪೊಲೀಸ್ ಚಿಣ್ಣರ ಅಂಗಳ "ವೆಂದು ಪುನರುಜ್ಜೀವನಗೊಳಿಸಲಾಗಿದೆ. ಇದರಿಂದ ನಮ್ಮ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ಸದುದ್ದೇಶವಿದೆ ಎಂದರು.
60 ಮಕ್ಕಳಿಗೆ ಅವಕಾಶ:ಪ್ರಿಕೆಜಿ, ಎಲ್‌ಕೆಜಿ, ಯುಕೆಜಿಯಲ್ಲಿ ಒಟ್ಟು 60 ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ಇದೆ. ಈವರೆಗೆ 30 ಮಕ್ಕಳು ಪ್ರವೇಶ ಪಡೆದಿದ್ದಾರೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಆಕಸ್ಮಾತ್ ನಿಗದಿತ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳು ಪ್ರವೇಶ ಪಡೆಯದಿದ್ದರೆ, ಸಾರ್ವಜನಿಕರ ಮಕ್ಕಳಿಗೆ ಪ್ರವೇಶಾವಕಾಶ ನೀಡಿ, ದಾಖಲಾತಿಗೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
ದಾವಣಗೆರೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಕುಟುಂಬಗಳಿವೆ. ನಮ್ಮೆಲ್ಲಾ ಅಧಿಕಾರಿಗಳು, ಸಿಬ್ಬಂದಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ಒದಗಿಸಬೇಕೆಂಬ ಸದುದ್ದೇಶದಿಂದ ಜಿಲ್ಲಾ ಕೇಂದ್ರದಲ್ಲೇ ಪೊಲೀಸ್ ವಸತಿ ಗೃಹಗಳ ಸಮೀಪವೇ ಪೊಲೀಸ್ ಚಿಣ್ಣರ ಅಂಗಳ ಸ್ಥಾಪಿಸಿದ್ದೇವೆ. ಆದಷ್ಟು ಬೇಗನೆ ಇಲ್ಲಿಗೆ ಶಿಕ್ಷಕರನ್ನು ಸಹ ನೇಮಕ ಮಾಡಲಿದ್ದೇವೆ. ಮಕ್ಕಳು ಆಡುತ್ತಲೇ, ಆಟೋಟಗಳಿಂದಲೂ ಶಿಕ್ಷಣ ಪಡೆಯಬೇಕೆಂಬ ಕಾರಣಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದೇವೆ. ಶೀಘ್ರವೇ ಮತ್ತಷ್ಟು ಆಟೋಪಕರಣಗಳನ್ನು ಇಲ್ಲಿಗೆ ಒದಗಿಸುತ್ತೇವೆ ಎಂದು ತಿಳಿಸಿದರು.
ಪೊಲೀಸ್ ಚಿಣ್ಣರ ಅಂಗಳವು ಜೂ.3ರಿಂದ ಕಾರ್ಯಾರಂಭವಾಗಲಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸಮೀಪದಲ್ಲೇ ಪೊಲೀಸ್ ಚಿಣ್ಣರ ಅಂಗಳ ಇದೆ. ಹರಿಹರ ತಾಲೂಕು ಕೊಂಡಜ್ಜಿ ಸೇರಿದಂತೆ ಇತರೆಡೆ ದೂರ ದೂರಕ್ಕೆ ಹೋಗುವುದು ತಪ್ಪಲಿದೆ. ಅಲ್ಲದೇ, ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವು ದೊರೆಯಲಿದೆ. ಶಿಕ್ಷಕ ಸಮೂಹವು ಸಹ ನಮ್ಮ ಇಲಾಖೆ ನಿರೀಕ್ಷೆ ಮತ್ತು ಆಶಯದಂತೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ನೀಡುವ ವಿಶ್ವಾಸವಿದೆ ಎಂದು ಎಸ್‌ಪಿ ಉಮಾ ಪ್ರಶಾಂತ ಹೇಳಿದರು.
- - - -30ಕೆಡಿವಿಜಿ7, 8: