ರೈತರಿಗೆ ತೃಪ್ತಿಯಾಗುವಂತೆ ಭೂಮಿಗೆ ದರ ನಿಗದಿಯಾಗಲಿ

KannadaprabhaNewsNetwork |  
Published : Jun 12, 2025, 02:32 AM IST
11ಕೆಆರ್ ಎಂಎನ್ 5.ಜೆಪಿಜಿರಾಮನಗರದ ಕಂದಾಯ ಭವನದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ದರ ನಿಗದಿ ಪಡಿಸುವ ಸಂಬಂಧ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕು. ಅಭಿವೃದ್ಧಿಯ ಜೊತೆಗೆ ರೈತರಿಗೆ ಸೂಕ್ತ ಪರಿಹಾರ ನೀಡುವುದು ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಉಪನಗರ (ಟೌನ್ ಶಿಪ್ ) ಎಷ್ಟು ಮುಖ್ಯವೋ, ರೈತರ ಬದುಕು ಅಷ್ಟೇ ಮುಖ್ಯ. ನಾನು ರೈತರ ಪರ. ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ರೈತರಿಗೆ ತೃಪ್ತಿಯಾಗುವಂತೆ ಸೂಕ್ತ ದರ ನಿಗದಿ ಮಾಡಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸಲಹೆ ನೀಡಿದರು.ನಗರದ ಕಂದಾಯ ಭವನದಲ್ಲಿ ನಡೆದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ದರ ನಿಗದಿ ಪಡಿಸುವ ಸಂಬಂಧ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕು. ಅಭಿವೃದ್ಧಿಯ ಜೊತೆಗೆ ರೈತರಿಗೆ ಸೂಕ್ತ ಪರಿಹಾರ ನೀಡುವುದು ಮುಖ್ಯವಾಗಿದೆ ಎಂದರು.ಟೌನ್ ಶಿಪ್ ಯೋಜನೆಯ ಬಗ್ಗೆ ಜಿಬಿಡಿಎಯಿಂದ ರೈತರು ಸೇರಿದಂತೆ ನಮಗೂ ಸ್ಪಷ್ಟತೆ ಬೇಕಾಗಿದೆ. ಉಪನಗರ ಸಂಬಂಧ ರೈತರು ಗೊಂದಲದಲ್ಲಿದ್ದಾರೆ. ಈಗಾಗಲೇ ಭೂ ಸ್ವಾಧೀನ ಸಂಬಂಧ ನೋಟಿಪಿಕೇಷನ್ ಆಗಿದ್ದು, ಆಕ್ಷೇಪಣ ಅರ್ಜಿಗಳನ್ನು ಪಡೆಯಲಾಗಿದೆ. ಯೋಜನೆ ಅನುಷ್ಠಾನ ಆಗಬೇಕಾದರೆ ಮೊದಲು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೇಡಿಕೆಗಳನ್ನು ಈಡೇರಿಸುವುದು ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಕರ್ತವ್ಯ. ಈ ವಿಷಯದಲ್ಲಿ ಅಧಿಕಾರಿಗಳು ಸಹ ಯಾವುದೇ ಗೊಂದಲ ಮೂಡಿಸದೆ ಸೂಕ್ತ ತೀರ್ಮಾನಕ್ಕೆ ಬರುವಂತೆ ತಿಳಿಸಿದರು.ಉಪನಗರ ಯೋಜನೆ ಅನುಷ್ಠಾನ ಮಾಡುವಾಗ ಗ್ರಾಮ ಪರಿಮಿತಿ, ಶಾಲೆಗಳು, ಹುಲ್ಲುಗಾವಲು ಮೀಸಲು, ಕೆರೆಗಳು, ಸಮುದಾಯ ಭವನಗಳಿಗೆ ಎಕ್ಸೆಂಪ್ಷನ್ ಮಾನದಂಡಗಳನ್ನು ಪಾಲನೆ ಮಾಡಿ, ನಮಗೆ ರೈತರ ಭೂಮಿಗೆ ನ್ಯಾಯಯುತವಾದ ಮಾರುಕಟ್ಟೆ, ಎಸ್‌ಆರ್ ವ್ಯಾಲ್ಯೂ ಬೆಲೆಗೆ ಒಂದಿಷ್ಟು ಬೆಲೆ ಸೇರಿಸಿ ದರ ನಿಗದಿ ಮಾಡಿದರೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಧಿಕಾರ ಒಪ್ಪಿದರೆ ಬಿಡದಿ ಉಪನಗರ ನಿರ್ಮಾಣ ಮಾಡಲು ಸುಗಮವಾಗಲಿದೆ ಎಂದು ಬಾಲಕೃಷ್ಣ ಸಲಹೆ ನೀಡಿದರು.ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಪ್ರಾಧಿಕಾರವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಶಾಸಕರ ಮಾರ್ಗ ದರ್ಶನದಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಿಲು ಬದ್ಧವಾಗಿದೆ ಎಂದರು.ಟೌನ್ ಶಿಪ್ ಅನುಷ್ಠಾನ ಮಾಡುವುದು ಎಷ್ಟು ಮುಖ್ಯವೊ, ಹಾಗೆಯೆ ರೈತರ ಬದುಕನ್ನು ಕಾಪಾಡುವುದು ಸಹ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆಯಾಮಗಳಲ್ಲಿ ಡಿ.ಕೆ.ಶಿವಕುಮಾರ್, ಶಾಸಕರು ಹಾಗೂ ನಾವುಗಳು ಚಿಂತನೆ ನಡೆಸುತ್ತಿದ್ದೇವೆ. ರೈತರ ಎಲ್ಲ ಗೊಂದಲಗಳಿಗೆ ಕೆಲವೇ ದಿನಗಳಲ್ಲಿ ತೆರೆ ಎಳೆಯಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಬಿಡಿಎ ಆಯುಕ್ತರಾದ ರಾಜೇಂದ್ರ ಚೋಳನ್ ಮಾತನಾಡಿ, ಶಾಸಕ ಎಚ್.ಸಿ.ಬಾಲಕೃಷ್ಣರವರು ಸಭೆಗೆ ಉಪಯುಕ್ತ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಪ್ರಾಧಿಕಾರದ ಅಪರ ಉಪ ಆಯುಕ್ತ ಮಾರುತಿಪ್ರಸನ್ನ, ನಿರ್ದೇಶಕರಾದ ರಮೇಶ್, ಪುಟ್ಟಯ್ಯ, ಕಲ್ಯಾಣಕುಮಾರಿ, ನರಸಿಂಹಯ್ಯ ಸೇರಿದಂತೆ ಎಸ್‌ಎಲ್‌ಓಗಳು, ಅಧಿಕಾರಿಗಳು ಉಪಸ್ಥಿತರಿದ್ದರು.11ಕೆಆರ್ ಎಂಎನ್ 5.ಜೆಪಿಜಿರಾಮನಗರದ ಕಂದಾಯ ಭವನದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ