ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಗ್ರಾಮದ ಅಭಿವೃದ್ಧಿ ಕನಸನ್ನು ನನಸಾಗಿಸಬೇಕು.
ಕನ್ನಡಪ್ರಭ ವಾರ್ತೆ ನವಲಿ
ಮನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯುವಂತೆ ಚಿಕ್ಕಡಂಕನಕಲ್ ಪಿಡಿಒ ವೀರಣ್ಣ ನೆಕ್ರಳ್ಳಿ ಹೇಳಿದರು.
ನವಲಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ ನರೇಗಾ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು. ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಗ್ರಾಮದ ಅಭಿವೃದ್ಧಿ ಕನಸನ್ನು ನನಸಾಗಿಸಬೇಕು. ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಸಾಮಾಜಿಕ ಅರಣ್ಯ ಇಲಾಖೆಯಡಿ ಸಿಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ರಾಜಶೇಖರ ಕೆ. ಮಾತನಾಡಿ, ಮನರೇಗಾ ಕೆಲಸವನ್ನು ಮಾಡುವ ಕಾಯಕ ಬಂಧುಗಳು ಕೂಲಿಕಾರರಿಗೆ 100 ದಿನಗಳ ಕೆಲಸವನ್ನು ಕೊಡಿಸುವಲ್ಲಿ ಶ್ರಮಿಸಬೇಕು. ಕಾಲ-ಕಾಲಕ್ಕೆ ನಮೂನೆ-06 ಅನ್ನು ಗ್ರಾಮ ಪಂಚಾಯಿತಿಗೆ ತುಂಬಿ ಕೊಡಬೇಕು. ಬದು ನಿರ್ಮಾಣ, ಕೃಷಿ ಹೊಂಡ, ದನದ ದೊಡ್ಡಿ, ಮೇಕೆ ಶೆಡ್, ಹಂದಿ ಶೆಡ್, ಕೋಳಿ ಶೆಡ್ ಸೇರಿದಂತೆ ತೋಟಗಾರಿಕೆ ಬೆಳೆಗಳು, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ಕಾಮಗಾರಿ ಮಾಡಲು ಅವಕಾಶವಿದೆ. ಇದನ್ನು ಕೂಲಿಕಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಬಳಿಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ತಳವಾರ ಮಾತನಾಡಿದರು.
ಈ ವೇಳೆ ಸದಸ್ಯರು, ಕಾಯಕ ಬಂಧುಗಳು, ಮೇಟಿಗಳು ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರು, ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು, ಕಾಯಕ ಬಂಧುಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.