ಕನ್ನಡಪ್ರಭ ವಾರ್ತೆ ಉಡುಪಿ
ದೇವಪುತ್ರರಾದ ಯೇಸುಕ್ರಿಸ್ತರು ಈ ಜಗಕ್ಕೆ ಆಗಮಿಸಿ ಮನುಷ್ಯ ಜೀವನದಲ್ಲಿ ಮಿಳಿತಗೊಂಡು, ಪಾಪವೊಂದನ್ನು ಬಿಟ್ಟು ಎಲ್ಲದರಲ್ಲೂ ಮಾನವರಂತೆ ಜೀವಿಸಿ, ಸತ್ಯ ಸ್ಥಾಪನೆಗಾಗಿ ಯಾತನೆಗೆ ಒಳಗಾಗಿ ಶಿಲುಬೆಯಲ್ಲಿ ಮೃತಪಟ್ಟರು. ಆದರೆ, ತಾವು ಮುಂಚಿತವಾಗಿ ಹೇಳಿದಂತೆ ಮೂರನೇಯ ದಿನ ಮೃತರ ಮಧ್ಯದಿಂದ ಜೀವಂತವಾಗಿ ಎದ್ದರು. ಇದೇ ಸತ್ಯವನ್ನು ಸಂಭ್ರಮದಿಂದ ಆಚರಿಸುವ ಹಬ್ಬ ಈಸ್ಟರ್ ಮಹೋತ್ಸವ.
ಈಸ್ಟರ್ ಮಹೋತ್ಸವಕ್ಕೆ ಮುಂಚಿತವಾಗಿ ನಲ್ವತ್ತು ದಿನಗಳು ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮಗಳಿಂದ ಕಳೆದು ಎಲ್ಲ ಕ್ರೈಸ್ತ ವಿಶ್ವಾಸಿಗಳು ಈ ಮಹೋತ್ಸವಕ್ಕೆ ಸಿದ್ಧತೆಯನ್ನು ನಡೆಸುತ್ತಾರೆ. ಈ ಕಾಲದಲ್ಲಿ ವಿಶೇಷವಾಗಿ ತಮ್ಮ ಪಾಪಮಯ ಜೀವನಕ್ಕಾಗಿ ಪಶ್ಚಾತ್ತಾಪಪಟ್ಟು, ಪಾಪನಿವೇದನೆಯನ್ನು ಮಾಡಿ, ಪಾಪಮಯ ಜೀವನವನ್ನು ತೊರೆಯುವ ಸಂಕಲ್ಪವನ್ನು ಮಾಡುತ್ತಾರೆ. ಈ ಕಾರಣದಿಂದ, ಈಸ್ಟರ್ ಮಹೋತ್ಸವ ನವಜೀವನದ ಉದಯ - ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮರಣದಿಂದ ನವಜೀವನದೆಡೆಗೆ ನಡೆವ ಪಯಣ.ಮನುಷ್ಯ ಜೀವನದಲ್ಲಿ ಕಟ್ಟಕಡೆಯವರೆಗೆ ಬದುಕಿ ಉಳಿಯುವುದು ನಿರೀಕ್ಷೆ ಅಥವ ಭರವಸೆ. ಭರವಸೆಯನ್ನು ಕಳೆದುಕೊಂಡವನು ಜೀವಂತವಿದ್ದರೂ ಸತ್ತಂತೆ. ಇಂದಿನ ಪ್ರಪಂಚದಲ್ಲಿ ಅನೇಕರು ವಿವಿಧ ಕಾರಣಗಳಿಂದ ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ನಿರಾಶರಾಗುತ್ತಾರೆ - ಬಡತನ, ನಿರುದ್ಯೋಗ, ಅಶಾಂತಿ, ಜಗಳ, ಮುರಿದುಹೋದ ಸಂಬಂಧಗಳು, ಇನ್ನಿತರ ಕಾರಣಗಳಿಂದ ಭರವಸೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಬಲಿಯಾಗುತ್ತಾರೆ. ಅನೇಕ ಬಾರಿ ಅಂತಹವರಿಗೆ ಭರವಸೆಯ ಒಂದು ಮಾತೂ ಸಿಗುವುದು ದುರ್ಲಭ.
ಪುನರುತ್ಥಾನಿ ಯೇಸು ಸ್ವಾಮಿ ಇಡೀ ಮನುಜಕುಲಕ್ಕೆ ಹೊಸಜೀವನದ ಭರವಸೆಯನ್ನು ನೀಡಿದ್ದಾರೆ. ಅದನ್ನು ಸಂತೋಷದಿಂದ ಸ್ವೀಕರಿಸಿ ಜೀವನ. ನಮ್ಮ ಜೀವನದ ಕಷ್ಟ-ಕಾರ್ಪಣ್ಯಗಳೆಲ್ಲ ಯೇಸುಸ್ವಾಮಿಯ ಪುನರುತ್ಥಾನದ ಸೂರ್ಯ ರಶ್ಮಿಯ ಪ್ರಭಾವದಿಂದ ಕರಗಿಹೋಗಲಿ. ನಮ್ಮೆಲ್ಲರ ಜೀವನದಲ್ಲಿ ಹೊಸ ಜೀವನದ ಹುಮ್ಮಸ್ಸು ಹಾಗೂ ಪ್ರೇರಣೆ ಕಂಡು ಬರಲಿ.
ನನ್ನೆಲ್ಲಾ ಸೋದರ ಸೋದರಿಯರಿಗೆ ಈಸ್ಟರ್ ಹಬ್ಬದ ಶುಭಾಷಯಗಳನ್ನು ಕೋರಿ, ಜೀವನದಲ್ಲಿ ಸಕಲ ಒಳಿತನ್ನು ಬಯಸುತ್ತೇನೆ. ಮೃತ್ಯುಂಜಯ ಯೇಸುಸ್ವಾಮಿ ನಮ್ಮೆಲ್ಲರನ್ನೂ ಆಶೀರ್ವದಿಸಿ ಕಾಪಾಡಲಿ.। ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು