ಚದುರಿದ ಮನಸ್ಸು ಸೇರಿಸುವ ಕಾರ್ಯವಾಗಲಿ: ಪ್ರಮೋದ ಹೆಗಡೆ

KannadaprabhaNewsNetwork | Published : Jan 13, 2025 12:45 AM

ಸಾರಾಂಶ

ಸ್ವರ್ಣವಲ್ಲೀ ಶ್ರೀಗಳು ಭಗವದ್ಗೀತಾ ಜ್ಞಾನ ಯಜ್ಞದ ಚಳವಳಿಯನ್ನೇ ರಾಜ್ಯಾದ್ಯಂತ ನಡೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಚದುರಿದ ಮನಸ್ಸನ್ನು ಸೇರಿಸುವ ಕಾರ್ಯ ಮಾಡುತ್ತದೆ.

ಯಲ್ಲಾಪುರ: ಸಮಾಜದಲ್ಲಿ ಪರಸ್ಪರ ಮನಸ್ಸುಗಳು, ಕುಟುಂಬಗಳು ಚದುರಿಹೋಗಿವೆ. ಇದು ಜಾಗತಿಕರಣದ ಪ್ರಭಾವವೂ ಹೌದು. ಹಾಗಂತ ಅಮೆರಿಕ ಹತ್ತಿರವಾಗಿದೆ. ನಮ್ಮ ಹಿರಿಯರು, ಸಂಘಟಕರು ಇಂತಹ ಕಾರ್ಯಕ್ರಮಗಳ ಮೂಲಕ ಜನರನ್ನು ಪರಸ್ಪರ ಸೇರಿಸುತ್ತಿರುವುದು ಮಾದರಿಯಾಗಿದೆ ಎಂದು ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.

ಜ. ೧೧ರಂದು ಶನಿವಾರ ಸಂಜೆ ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಕರಡೊಳ್ಳಿಯ ಗೋವರ್ಧನ ಗೋಶಾಲೆ ಮತ್ತು ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡ ಆಲೆಮನೆ ಹಬ್ಬ ಮತ್ತು ನಾದಮಜ್ಜನ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತೀಯ ಪರಂಪರೆ, ಸಂಸ್ಕಾರ, ಸಂಸ್ಕೃತಿ ಉಳಿಸಬೇಕಾದರೆ ಇಂತಹ ಕಾರ್ಯಕ್ರಮಗಳು ಸದಾ ನಡೆಯಬೇಕು. ಅದರಲ್ಲೂ ಸ್ವರ್ಣವಲ್ಲೀ ಶ್ರೀಗಳು ಭಗವದ್ಗೀತಾ ಜ್ಞಾನ ಯಜ್ಞದ ಚಳವಳಿಯನ್ನೇ ರಾಜ್ಯಾದ್ಯಂತ ನಡೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಚದುರಿದ ಮನಸ್ಸನ್ನು ಸೇರಿಸುವ ಕಾರ್ಯ ಮಾಡುತ್ತದೆ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಕ್ಕಳಿಗೆ ಎದೆಹಾಲಿನ ನಂತರ ಹಸುವಿನ ಹಾಲು ಶ್ರೇಷ್ಠ. ಗೋಮೂತ್ರ, ಗೋಮಯ ಸೇರಿದಂತೆ ಎಲ್ಲ ವಸ್ತುಗಳೂ ಗೋವಿನದ್ದು ಮನುಷ್ಯನಿಗೆ ಅದರಲ್ಲೂ ರೈತರಿಗೆ ಅನಿವಾರ್ಯವಾಗಿ ಬೇಕೇ ಬೇಕು ಎಂದರು.

ಹುಬ್ಬಳ್ಳಿಯ ಗೋಗತಿ ವಿಧಿ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥ ಡಿ.ಎಸ್. ಭಟ್ಟ ಮಾತನಾಡಿ, ಜಿಲ್ಲೆಗೆ ಗೋರಥ ಬರುತ್ತಿದೆ. ಇಡೀ ಜಿಲ್ಲೆಯ ಜನ ಗೋಮಾತೆಗೆ ಗೌರವಿಸುವ, ಪ್ರೀತಿಸುವ ಮತ್ತು ರಥವನ್ನು ಅಷ್ಟೇ ಪ್ರೀತಿಯಿಂದ ಸ್ವಾಗತಿಸಬೇಕು ಎಂದರು.ಕರಡೊಳ್ಳಿ ಗೋವರ್ಧನ ಗೋಶಾಲೆಯ ಅಧ್ಯಕ್ಷ ರಾಮಕೃಷ್ಣ ಭಟ್ಟ ಕವಾಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥರಾದ ವಿವೇಕ ಮೋರೆ, ಪುಟ್ಟಸ್ವಾಮಿ, ಗಂಗಾಧರ ವೇದಿಕೆಯಲ್ಲಿದ್ದರು. ಗೋಶಾಲೆ ಪ್ರಧಾನ ಕಾರ್ಯದರ್ಶಿ ಗಣಪತಿ ಭಟ್ಟ ಕೋಲೀಬೇಣ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

ಸಚಿವರಿಂದ ಡಿವೈಎಸ್ಪಿಗೆ ಹೊಸ ವಾಹನ ಹಸ್ತಾಂತರ

ಭಟ್ಕಳ: ಇಲ್ಲಿನ ಡಿವೈಎಸ್ಪಿಗೆ ಶಾಸಕರ ಅನುದಾನದಡಿಯಲ್ಲಿ ಮಂಜೂರಿಯಾದ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ವಾಹನದ ಕೀ ಹಸ್ತಾಂತರ ಮೂಲಕ ವಿತರಿಸಿದರು.ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಸಕರು ತಮ್ಮ ಅನುದಾನದಡಿಯಲ್ಲಿ ಪೊಲೀಸ್ ಇಲಾಖೆಗೆ ತಲಾ ಎರಡು ವಾಹನಗಳನ್ನು ವಿತರಿಸಿದ್ದಾರೆ. ಭಟ್ಕಳಕ್ಕೂ ಎರಡು ವಾಹನವನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ. ಇದರಿಂದ ಇಲಾಖೆಗೆ ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ, ಮರುಡೇಶ್ವರ ಪಿಎಸ್ಐ ಹನುಮಂತ ಬಿರಾದಾರ ಮುಂತಾದವರಿದ್ದರು.

Share this article