ಕನ್ನಡಪ್ರಭ ವಾರ್ತೆ ತಿಕೋಟಾ
ತಾಲೂಕಿನ ಟಕ್ಕಳಕಿ ಮತ್ತು ಸಿದ್ಧಾಪುರ(ಕೆ) ಗ್ರಾಮ ಪಂಚಾಯತಿಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಅವರು ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಟಕ್ಕಳಕಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತಿ ಅನುಷ್ಠಾನ ಮಾಡುವ ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಯೋಜನೆ, ಎನ್.ಆರ್.ಎಲ್.ಎಂ ಸೇರಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು ಗ್ರಾಮ ಪಂಚಾಯತಿ ವತಿಯಿಂದ ಅನುಷ್ಠಾನ ಮಾಡುವ ಎಲ್ಲ ಯೋಜನೆಗಳನ್ನು ಪರಿಣಾಣಮಕಾರಿಯಾಗಿ ಅನುಷ್ಠಾನ ಮಾಡುವದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು ಜೊತೆಗೆ ಯಾವದೇ ಸ್ಥಳದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ನಂತರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ಬಿಸಿಯೂಟದಲ್ಲಿ ಹಾಗೂ ಅಡುಗೆ ಕೋಣೆಯಲ್ಲಿ ಅತ್ಯಂತ ಹೆಚ್ಚಿನ ಸ್ವಚ್ಛತೆ ಕಾಪಾಡಲು ಶಿಕ್ಷಕರಿಗೆ ಹಾಗೂ ಅಡುಗೆ ಸಹಾಯಕರಿಗೆ ಸೂಚನೆ ನೀಡಿದರು. ನಂತರ ಶಾಲೆಯ ಸಂಪೂರ್ಣ ಆವರಣವನ್ನು ಸ್ವಚ್ಛತೆಯಿಂದ ಕಾಪಾಡುವದರ ಜೊತೆಗೆ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲು ತಿಳಿಸಿದರು. ಶಾಲಾ ಆವರಣದಲ್ಲಿರುವ ಗ್ರಂಥಾಲಯ ಹಾಗೂ ಕೂಸಿನ ಮನೆ ಪರಿಶೀಲನೆ ನಡೆಸಿದ್ದು, ಕೂಸಿನ ಮನೆ & ಗ್ರಂಥಾಲಯದ ಕುರಿತು ಗ್ರಾಮದಲ್ಲಿ ವ್ಯಾಪಕ ಪ್ರಚಾರ ಮಾಡಿ ಪಿಡಿಒ ಅವರಿಗೆ ಸೂಚನೆ ನೀಡಿದರು.ಸಿದ್ಧಾಪುರ(ಕೆ) ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ ಯೋಜನೆಘಳ ಕಡತಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ, ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಹೇಳಿದರು. ಎಲ್ಲಡೇ ಡೆಂಘೀ ಹೆಚ್ಚಾಗಿ ಕಾಣಿಸುತ್ತಿದ್ದು, ಹೀಗಾಗಿ ಗ್ರಾಮದಲ್ಲಿ, ವಸತಿ ನಿಲಯಗಳಲ್ಲಿ, ಶಾಲೆ-ಅಂಗನವಾಡಿ ಸಹಿತ ಯಾವುದೇ ಸ್ಥಳದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಶಾಲಾ ಅಡುಗೆ ಕೋಣೆಯಲ್ಲಿ ಬಳಸಿದ ತ್ಯಾಜ್ಯ ನೀರು ಸರಾಗವಾಗಿ ಹೊರಗಡೆ ಚರಂಡಿಗೆ ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿಯ ಸಿಬ್ಬಂದಿಗೆ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ, ಟಕ್ಕಳಕಿ ಪಿಡಿಒ ಅಕ್ಕಮಹಾದೇವಿ ಪವಾರ, ಸಿದ್ಧಾಪುರ(ಕೆ) ಪಿಡಿಒ ಪದ್ಮಿನಿ ಬಿರಾದಾರ ಸೇರಿದಂತೆ ಎರಡು ಗ್ರಾಪಂನ ಚುನಾಯಿತ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.