ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿರುವ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಅವರ ಅಭಿಮಾನದ ಅಭಿನಂದನಾ ಸಮಾರಂಭ ನಡೆಯಿತು.
ಯಲಬುರ್ಗಾ: ಯಾವುದೇ ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಮಾಡಿದ ಕಾರ್ಯ ಮತ್ತು ವ್ಯಕ್ತಿತ್ವ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ನಿವೃತ್ತ ಡಿಡಿಪಿಐ ಎಸ್.ಡಿ. ಗಾಂಜಿ ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಬಳಗ ಹಾಗೂ ವಿವಿಧ ಸಂಘಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತಿ ಹೊಂದಿರುವ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಅವರ ಅಭಿಮಾನದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೀರಭದ್ರಪ್ಪ ಅವರು ತಮ್ಮ ವೃತ್ತಿ ಬದುಕಿನೊಂದಿಗೆ ಸ್ನೇಹಜೀವಿಯಾಗಿ ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವುದಲ್ಲದೆ ಎಲ್ಲ ಶಿಕ್ಷಕರಿಗೂ ಸ್ಫೂರ್ತಿದಾಯಕರಾಗಿದ್ದಾರೆ ಎಂದು ಹೇಳಿದರು.ಸರ್ಕಾರಿ ನೌಕರರು ತಮ್ಮ ಸೇವಾ ವೃತ್ತಿಯಲ್ಲಿದ್ದಾಗ ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಅವರನ್ನು ನೆನೆಯುವರ ಸಂಖ್ಯೆ ಕಡಿಮೆ. ಆದರೆ ಅದೇ ವ್ಯಕ್ತಿ ಸೇವೆಯಿಂದ ನಿವೃತ್ತಿ ಹೊಂದಿದಾಗ ಅವರ ಕಾರ್ಯವೈಖರಿ, ಸೇವಾ ಮನೋಭಾವವನ್ನು ಹಾಡಿ ಹೊಗಳುವವರೇ ಹೆಚ್ಚು. ವೀರಭದ್ರಪ್ಪ ಅವರು ಯಾವತ್ತು
ವೃತ್ತಿ ಜೀವನದಲ್ಲಿ ಅತ್ಯಂತ ಸರಳ ವ್ಯಕ್ತಿತ್ವದಿಂದ ಸೇವೆಯನ್ನು ಪೂರ್ಣಗೊಳಿಸಿ, ಎಲ್ಲರ ವಿಶ್ವಾಸ ಗಳಿಸಿಕೊಂಡು, ಒಬ್ಬ ದಕ್ಷ ಅಧಿಕಾರಿಯಾಗಿ ಸೇವೆ ಪೂರ್ಣಗೊಳಿಸಿದ್ದಾರೆ ಎಂದರು.
ನಿವೃತ್ತ ಬಿಇಒ ಪದ್ಮನಾಭ ಕರ್ಣಂ, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಹೇಶ ಸಬರದ, ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ವೀರಭದ್ರಪ್ಪ ಅವರು ಎಲ್ಲ ಶಿಕ್ಷಕರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಇತರ ಅಧಿಕಾರಿಗಳಿಗೆ ಮಾದರಿಯಾಗುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು.
ವೀರಭದ್ರಪ್ಪ ಅಂಗಡಿ ಹಾಗೂ ಅವರ ಪತ್ನಿ ನೀಲಮ್ಮ ಅವರನ್ನು ಸನ್ಮಾನಿಸಲಾಯಿತು. ವಸತಿ ಶಾಲೆಯ ಪ್ರಾಚಾರ್ಯ ವಿ.ಬಿ. ಹನುಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಶರಣಪ್ಪ ವೀರಾಪುರ, ಬಸವರಾಜ ಮುಳಗುಂದ, ಸುರೇಶ ಹೊಸ್ಮನಿ, ಎಂ.ಎನ್. ಜನಾದ್ರಿ, ಬಸವರಾಜ ಮಾಸ್ತಿ, ಮೆಹಬೂಬ್ ಬಾದಶ, ಸಂಗಯ್ಯ ಹಿರೇಮಠ, ಭೀಮನಗೌಡ ಮಾಸಗಟ್ಟಿ, ಗಂಗಮ್ಮ ಸೊಬಗಿನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.