ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯಗದಗ: ಕರ್ನಾಟಕ ಏಕೀಕರಣವಾಗಿ 50 ವರ್ಷ ಕಳೆದರೂ ರಾಜ್ಯದಲ್ಲಿ ಕನ್ನಡ ಭಾಷೆಯ ಬಗ್ಗೆಯ ಪ್ರೀತಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬೆಳೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಅವರು ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪಕ್ಕದ ತಮಿಳುನಾಡಿನಲ್ಲಿ ತಮಿಳು, ಆಂಧ್ರದಲ್ಲಿ ತೆಲಗು, ಕೇರಳದಲ್ಲಿ ಮಲೆಯಾಳಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರು ಹೇಗೆ ತಮ್ಮ ಮಾತೃ ಭಾಷೆಯ ಮೇಲೆ ಪ್ರೀತಿ ವ್ಯಕ್ತ ಪಡಿಸುತ್ತಾರೆ ಹಾಗೆ ನಮ್ಮ ರಾಜ್ಯದ ಜನರು ಕನ್ನಡ ಭಾಷಾ ಪ್ರೀತಿಯನ್ನು ಬೆಳೆಸಿಕೊಂಡಿಲ್ಲ.
ಬೇರೆ ಭಾಷೆ ಕಲಿಯಿರಿ ಆದರೆ ಕನ್ನಡವನ್ನು ಪ್ರೀತಿಸಿ, ಬಳಸಿ. ಇಂದಿನಿಂದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಕನ್ನಡ ಬಳಸುವ ಪ್ರತಿಜ್ಞೆ ಮಾಡಬೇಕು ಎಂದರು.ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಬಂದು ವಾಸವಿದ್ದು ದಶಕಗಳೇ ಆದರೂ ಕನ್ನಡ ಕಲಿಯದೇ ಇರುವ ಉದಾಹಣೆಗಳು ಇವೆ.
ನಾನು 1983ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಕಾವಲು ಸರಿಯಲ್ಲ ಎನ್ನುವ ಕಾರಣಕ್ಕೆ ಅದು ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಗಿದೆ ಎಂದರು.ಜಗತ್ತಿನಲ್ಲಿಯೇ 2 ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ ನಮ್ಮದು. ಶೇಕ್ಸಪೀಯರ್ ಗಿಂತಲೂ ಮೊದಲೇ ನಮ್ಮ ಆದಿ ಕವಿ ಪಂಪ ಜನಿಸಿದ್ದ ಎನ್ನುವುದಕ್ಕೆ ನಮ್ಮ ಬಹುದೊಡ್ಡ ದಾಖಲೆಗಳಿವೆ.
ಕರ್ನಾಟಕ ಏಕೀಕರಣ ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ. ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್. ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗಾತಿಗಳನ್ನು ಇಂದು ಎಲ್ಲರೂ ಸ್ಮರಿಸಬೇಕು.ಅವತ್ತು ಕೆ.ಹೆಚ್. ಪಾಟೀಲ, ಇಂದು ಎಚ್.ಕೆ. ಪಾಟೀಲ ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ ಇದು ಕಾಕತಾಳೀಯ ಎಂದರು.
ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಈ ಸಮಾಜದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.
ಈ ಹಿಂದೆ ಕೆ.ಎಚ್. ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಎಚ್.ಕೆ. ಪಾಟೀಲರು ಇಡೀ ರಾಜ್ಯಕ್ಕೆ ಶುದ್ದ ಕುಡಿಯುವ ನೀರು ಕೊಟ್ಟಿದ್ದಾರೆ. ಹೀಗಾಗಿ ಮುಂದೆ ಅವರು ನಾಮಪತ್ರ ಸಲ್ಲಿಸಿದರೆ ಸಾಕು, ನೀವೆಲ್ಲಾ ಪಾಟೀಲರನ್ನು ಗೆಲ್ಲಿಸಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ವಹಿಸಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಂಕಾಳು ವೈದ್ಯ, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿ ಹಲವಾರು ಶಾಸಕರು, ಇಲಾಖಾ ಕಾರ್ಯದರ್ಶಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.