ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಕರ್ನಾಟಕ ಸರ್ಕಾರವು ತಕ್ಷಣವೇ ಚಿಂತನೆ ಮಾಡಿ ಬಸವ ಕಲ್ಯಾಣಕ್ಕೆ ಮಾತು ಕೊಟ್ಟಂತೆ ವಚನ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕೆಂದು ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ಒತ್ತಾಯಿಸಿದರು.ಅವರು ಬಸವ ಧರ್ಮಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದ 2ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಎಂದು ಬ್ರಿಟೀಷರ ಕಾಲದಿಂದಲೂ ಅನೇಕ ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಸ್ವತಂತ್ರ ಧರ್ಮವನ್ನಾಗಿಸಿ ಪಡೆಯುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಸಮಾಜದ ಜನರು ಜಾಗೃತರಾಗಿ ತೀವ್ರ ಹೋರಾಟವನ್ನು ಮಾಡಬೇಕಾಗಿದೆ ಎಂದರು.
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ಸ್ವತಂತ್ರ ಧರ್ಮದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದ ಅವರು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ ಎಂದು ನುಡಿದರು.ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದು ಬಹಳ ಅವಶ್ಯಕವಾಗಿದೆ. ನಾವು ಅನೇಕ ಬಾರಿ ಈ ಕುರಿತು ಸರ್ಕಾರದ ಗಮನ ಸೆಳೆದಿದ್ದೇವೆ. ಹೀಗಾಗಿ ಈ ಕುರಿತು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು ಅದಾಗ್ಯೂ ತಪ್ಪಿದಲ್ಲಿ ಹೋರಾಟ ಮಾಡಲಾಗುವುದು ಎಂದು ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿಗಳು ಹೇಳಿದರು.
ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಮಾಡಬೇಕೆಂಬುದು ಬಹು ಜನರ ಬೇಡಿಕೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದಕ್ಕಾಗಿ ಅವರನ್ನು ಅಭಿನಂದಿಸಲು ಬಸವಕಲ್ಯಾಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುವಾಗ, ಮುಂದಿನ ವರ್ಷದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ. ಅದರಂತೆ ಅವರು ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.ಡಾ.ಗಂಗಾ ಮಾತಾಜಿ ಸಾನಿಧ್ಯ ವಹಿಸಿದ್ದರು. ಭಾಲ್ಕಿ ಹಿರೇಮಠದ ಗುರು ಬಸವಪಟ್ಟದೇವರು, ಗುರುದ್ವಾರ ಪ್ರಬಂಧಕ ಕಮಿಟಿಯ ವ್ಯವಸ್ಥಾಪಕ ಸರ್ದಾರ್ ದರ್ಬಾರಾ ಸಿಂಗ್, ಶಿವರಾಜ ನರಶೆಟ್ಟಿ, ಕುಶಾಲ ಪಾಟೀಲ್ ಗಾದಗಿ, ಮಡಿವಾಳಪ್ಪ ಮಂಗಲಗಿ, ರವಿ ಕೊಳಕುರ ಹಾಗೂ ರಾಜಶ್ರೀ ಖೂಬಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸವ ತತ್ವಕ್ಕಾಗಿ ಸಮಾಜಕ್ಕಾಗಿ ವಿವಿಧ ರಂಗದಲ್ಲಿ ಶ್ರಮಿಸಿರುವ ವಚನ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಅಲ್ಲಮಪ್ರಭು ನಾವದಗೇರೆ ಹಾಗೂ ಬಸವ ತತ್ವ ಪ್ರಸಾರ ಸಂಸ್ಥೆಯ ಅಧ್ಯಕ್ಷ ಶಂಕ್ರಣ್ಣ ಕೊಳಕೂರ ದಂಪತಿಗಳು ಸೇರಿದಂತೆ ಮುಂತಾದವರನ್ನು ಸನ್ಮಾನಿಸಲಾಯಿತು. ನವಲಿಂಗ ಪಾಟೀಲ್ ನಿರೂಪಿಸಿದರು.ಶಿಕ್ಷಣ ವ್ಯವಸ್ಥೆಯಲ್ಲಿ ಶರಣರ ತತ್ವ ಬೋಧಿಸಬೇಕು: ಸಾಹಿತಿ ಡಿ.ಶಬ್ರಿನಾ ಅಲಿ ಚಳ್ಳಿಕೆರೆಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶರಣ ತತ್ವಗಳನ್ನು ಮಕ್ಕಳಿಗೆ ಬೋಧಿಸುವಂತಾಗಬೇಕು ಇದರಿಂದ ಮಕ್ಕಳಲ್ಲಿ ಶರಣರ ತತ್ವ ತಿಳಿದುಕೊಳ್ಳಲು ಸಹಕರಿಯಾಗುತ್ತದೆ ಎಂದು ಸಾಹಿತಿ ಡಿ.ಶಬ್ರಿನಾ ಮಹಮದ್ ಅಲಿ ಚಳ್ಳಿಕೆರೆ ತಿಳಿಸಿದರು.ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿರುವ 23ನೇ ಕಲ್ಯಾಣ ಪರ್ವದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಚಾರ ಸದಾಚಾರಗಳ ಬಗ್ಗೆ ಉತ್ತಮವಾದ ನುಡಿಗಳು ಶರಣರು ನಮಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಲಿಂಗ ಭೇದ, ಜಾತಿ ಬೇಧಗಳನ್ನು ಮಾಡಬಾರದು ಎಂದು ಏಕದೇವ ನಿಷ್ಠೆ, ಕಾಯಕ ದಾಸೋಹ ನಿಷ್ಠೆಯನ್ನು ಬಸವಣ್ಣನವರು ಬೋಧಿಸಿದ್ದಾರೆ ಅದರಂತೆ ಇಂದಿನ ಸಮಾಜ ನಡೆಯಬೇಕು ಎಂದರು.ಕಲಬುರಗಿಯ ಹಿರಿಯ ಸಾಹಿತಿ ಮೀನಾಕ್ಷಿ ಬಾಳಿ ಮಾತನಾಡಿ, ಜನರು ಧರ್ಮದ ಕಡೆಗೆ ಬಾರದಿದ್ದಾಗ ಧರ್ಮವನ್ನು ಮನೆ ಮನಗಳ ಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಕ್ರಮವನ್ನು ಲಿಂ. ಜಗದ್ಗುರು ಮಾತೆ ಮಹಾದೇವಿ ಮತ್ತು ಜಗದ್ಗುರು ಲಿಂಗಾನಂದ ಸ್ವಾಮೀಜಿಯವರು ಮಾಡಿದ್ದಾರೆ ಎಂದು ತಿಳಿಸಿದ ಅವರು, ಬಸವಣ್ಣನವರ ವ್ಯಕ್ತಿತ್ವವನ್ನು ತೋರಿಸಿಕೊಟ್ಟವರು ಲಿಂಗಾನಂದ ಸ್ವಾಮೀಜಿ ಮತ್ತು ಜಗದ್ಗುರು ಮಾತೆ ಮಹಾದೇವಿ ಎಂದರು.
ಬಳ್ಳಾರಿಯ ರಾಷ್ಟ್ರೀಯ ಬಸವ ದಳ ಶಾರದಾ ಅವರು ಮಾತನಾಡಿ, ಮಹಿಳೆಯರು ಮಕ್ಕಳಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಬಸವಣ್ಣನವರ ವಚನಗಳು ಪೂರಕ ವಾಗಿವೆ. ಈ ಆಧುನಿಕ ಯುಗದಲ್ಲಿ ವಚನಗಳ ಪ್ರಸಾರ ಮಾಡಬೇಕಾದ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ನುಡಿದರು.ಮಹಿಳೆಯರು ಜಗದ್ಗುರುವಾಗುವಂಥ ಶಕ್ತಿಯನ್ನು ಕೊಟ್ಟಂತಹ ಧರ್ಮ ಯಾವುದಾದರೂ ಇದ್ದರೆ ಅದು ಲಿಂಗಾಯತ ಧರ್ಮ ಎಂದು ಶಾರಾದಾ ತಾಯಿ ನುಡಿದರು.ಡಾ.ಗಂಗಾ ಮಾತಾಜಿ ಸಾನಿಧ್ಯ ವಹಿಸಿದ್ದರು. ಡಾ.ಗಂಗಾಂಬಿಕ ಅಕ್ಕ, ಗೀತಾ ಖಂಡ್ರೆ, ಪ್ರೊ.ವೀಣಾ ಬಿರಾದರ ಹುಬ್ಬಳ್ಳಿ, ಸೋನಾಲ್ ಸಿಂಗ್, ಶಕುಂತಲಾ ಬೆಲ್ದಾಳೆ, ನಿರ್ಮಲಾ ಶಿವಣಕರ, ವಿಜಯಲಕ್ಷ್ಮಿ ಗಡ್ಡೆ, ಡಾ.ಜಯಶ್ರೀ ಬಶೆಟ್ಟಿ, ರಾಜಶ್ರೀ ಖೂಬಾ, ಸುವರ್ಣಾ ಚಿಮಕೋಡೆ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.