ಗುಡ್ಡದ ಮೇಲಿಂದ ರಸ್ತೆಗೆ ಬಿದ್ದ ಬಂಡೆಗಲ್ಲು: ನಿಟ್ಟುಸಿರು ಬಿಟ್ಟ ಜನ

KannadaprabhaNewsNetwork |  
Published : Oct 20, 2024, 02:07 AM IST
ಫೋಟೋ: 19ಜಿಎಲ್ಡಿ1- ಗುಳೇದಗುಡ್ಡ ಪಟ್ಟಣದಿಂದ ಹುಲ್ಲಿಕೇರಿ ಎಸ್ಪಿ  ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ಪಕ್ಕದ ಗುಡ್ಡದ ಬಂಡೆಗಲ್ಲುಗಳು ಕುಸಿದು ಬಿದ್ದು ರಸ್ತೆ ಮೇಲೆ  ಆವರಿಸಿರುವ ದೃಶ್ಯ | Kannada Prabha

ಸಾರಾಂಶ

ರಸ್ತೆ ನಿರ್ಮಾಣ ಮಾಡುವಾಗ ಗುಡ್ಡವನ್ನು ಕೊರೆಯಲಾಗಿದೆ. ಆದರೆ ಕೆಲ ಅಪಾಯವನ್ನೊಡ್ಡಬಹುದಾದ ಇಂತಹ ದೊಡ್ಡ ಗಾತ್ರದ ಬಂಡೆ ಒಡೆದು ಅನಾಹುತ ಮುಂಚಿತವಾಗಿ ತಡೆಯಬಹುದಿತ್ತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಗುಳೇದಗುಡ್ಡ ಪಟ್ಟಣದಿಂದ ಹುಲ್ಲಿಕೇರಿ ಎಸ್‌.ಪಿ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ಪಕ್ಕದ ಗುಡ್ಡದ ಬಂಡೆಗಳು ಕುಸಿದು ರಸ್ತೆ ಮೇಲೆ ಬಿದ್ದಿವೆ. ಆದರೆ ಆ ಸಮಯದಲ್ಲಿ ರಸ್ತೆ ಮೇಲೆ ಯಾವುದೇ ಅವಘಡ ಸಂಭವಿಸಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹುಲ್ಲಿಕೇರಿ ಮಾರ್ಗದ ರಸ್ತೆ ಪಕ್ಕದ ದೊಡ್ಡ ಗಾತ್ರದ ಬಂಡೆಗಲ್ಲು ಕುಸಿದು ರಸ್ತೆ ಮೇಲೆ ಬಂದು ಬಿದ್ದಿದೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಯಾವುದೇ ವಾಹನ ಸಂಚರಿಸದ ಕಾರಣ ಅಪಾಯ ತಪ್ಪಿದೆ.

ರಸ್ತೆ ನಿರ್ಮಾಣ ಮಾಡುವಾಗ ಗುಡ್ಡವನ್ನು ಕೊರೆಯಲಾಗಿದೆ. ಆದರೆ ಕೆಲ ಅಪಾಯವನ್ನೊಡ್ಡಬಹುದಾದ ಇಂತಹ ದೊಡ್ಡ ಗಾತ್ರದ ಬಂಡೆ ಒಡೆದು ಅನಾಹುತ ಮುಂಚಿತವಾಗಿ ತಡೆಯಬಹುದಿತ್ತು. ಈ ಬಂಡೆಯನ್ನು ರಸ್ತೆಯಿಂದ ತೆರವುಗೊಳಿಸಲು ಗ್ರಾಮಸ್ಥರು ಸಾಕಷ್ಟು ಬಾರಿ ಇಲಾಖಾ ಅಧಿಕಾರಿಗಳ ಗಮನಕ್ಕೂ ತಂದರು ಕ್ರಮಕ್ಕೆ ಯಾರೂ ಮುಂದಾಗಿದ್ದಿಲ್ಲ. ಮಳೆ ಬೀಳುವ ಸಂದರ್ಭದಲ್ಲಿ ಪ್ರಯಾಣಿಸುವಾಗ ಗ್ರಾಮಸ್ಥರು ಭಯಪಡುತ್ತಲೇ ಇದ್ದರು. ಆದರೆ ಈ ಸಲ ಬಂಡೆ ಕುಸಿದು ರಸ್ತೆ ಮೇಲೆ ಬಿದ್ದಿದೆ. ಯಾರಿಗೂ ಪ್ರಾಣಾಪಾಯವಾಗಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಭಯದಿಂದ ಹೇಳುತ್ತಾರೆ.

ಕಳೆದ 2 ದಿನಗಳಿಂದ ಲೋಕೋಪಯೋಗಿ ಇಲಾಖೆ ರಸ್ತೆ ಮೇಲೆ ಬಿದ್ದಿರುವ ದೊಡ್ಡ ಗಾತ್ರದ ಬಂಡೆಯನ್ನು ಯಂತ್ರದ ಸಹಾಯದಿಂದ ಒಡೆದು ರಸ್ತೆ ಮೇಲಿಂದ ಸ್ಥಳಾಂತರಿಸಿ ಸಂಚಾರಕ್ಕೆ ಶನಿವಾರ ಅನುಕೂಲ ಮಾಡಿಕೊಟ್ಟಿದ್ದಾರೆ. ಗುಳೇದಗುಡ್ಡದಿಂದ ಹುಲ್ಲಿಕೇರಿ ಮಾರ್ಗವಾಗಿ ನಂದಿಕೇಶ್ವರ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿ ಬನಶಂಕರಿಗೆ ಪ್ರಯಾಣಿಸಲು ಈ ಮಾರ್ಗ ಅನುಕೂಲ ಹಾಗೂ ಸಮೀಪವಾಗುತ್ತದೆ. ಪ್ರವಾಸಿಗಳಿಗೆ ತೊಂದರೆಯಾಗದಂತೆ ರಸ್ತೆ ಅಕ್ಕ ಪಕ್ಕದ ಅಪಾಯವೊಡ್ಡುವ ಬೃಹದಾಕಾರದ ಕಲ್ಲು ಬಂಡೆಗಳನ್ನು ಸ್ಥಳಾಂತರಿಸಬೇಕೆಂದು ಹುಲ್ಲಿಕೇರಿ ಎಸ್.ಪಿ.ಗ್ರಾಮದ ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಶೇಖರ ರಾಠೋಡ ಶಾಸಕರನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ. ------

ಬಹಳ ದಿನಗಳಿಂದ ದೊಡ್ಡ ಬಂಡೆಗಲ್ಲು ರಸ್ತೆ ಮೇಲೆ ಉರುಳುವ ಭಯ ಜನರಲ್ಲಿ ಇತ್ತು. ಲೋಕೋಪಯೋಗಿ ಇಲಾಖೆ ಬಂಡೆ ತೆಗೆಯದ ಕಾರಣ ಕಳೆದ ನಾಲ್ಕಾರು ದಿನಗಳಿಂದ ಸತತ ಮಳೆಯಾದ ಪರಿಣಾಮವಾಗಿ ದೊಡ್ಡ ಗಾತ್ರದ ಬಂಡೆ ಕುಸಿದು ರಸ್ತೆ ಮೇಲೆ ಬಿದ್ದಿದೆ. ಸದ್ಯ ಇಲಾಖೆಯವರು ಬಂಡೆ ತೆಗೆದು ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ.

ಪಿಂಟು ರಾಠೋಡ, ಗ್ರಾಪಂ ಮಾಜಿ ಸದಸ್ಯ ಹುಲ್ಲಿಕೇರಿ ಎಸ್.ಪಿ ಗ್ರಾಮ

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ