ವಿದ್ಯಾರ್ಥಿ ಸಮಾಜಕ್ಕೆ ಸಂತೋಷ ಕೊಡಲಿ

KannadaprabhaNewsNetwork | Published : Apr 14, 2024 1:49 AM

ಸಾರಾಂಶ

ಬುದ್ಧಿ ಎಂಬ ಬೀಜ ಬಿತ್ತಿ ಇದೀಗ ಅದರ ಫಲ ನೋಡುತ್ತಿದ್ದೇವೆ. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಮಾಡಿ ತಮ್ಮ ಶಾಲೆಗೆ ಋಣ ತೀರಿಸುತ್ತಿರುವ ಕಾರ್ಯ ಖುಷಿ ತಂದಿದೆ. ಪ್ರತಿಯೊಬ್ಬರು ಆಸೆ, ಅಹಂಕಾರ ತೊರೆಯಬೇಕು.

ಧಾರವಾಡ:

ತಾವು ಕಲಿಸಿದ ವಿದ್ಯಾರ್ಥಿಗಳು ಸಮಾಜಕ್ಕೆ ಸಂತೋಷ ಕೊಡುವ ನಾಗರಿಕರಾಗಬೇಕು ಎನ್ನುವುದೇ ಶಿಕ್ಷಕರ ಆಶಯವಾಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲರಾದ ಶೋಬಾ ಅನಬನ್‌ ಹೇಳಿದರು.

ಇಲ್ಲಿಯ ಬಾಸೆಲ್‌ ಮಿಶನ್‌ ಗಂಡು ಮಕ್ಕಳ ಪ್ರೌಢಶಾಲೆಯ 2000 ಬ್ಯಾಚ್‌ (ಎ,ಬಿ,ಸಿ.ಡಿ,ಇ) ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿದ ಅವರು, ತಾವು ಕಲಿಸಿದ ಶಿಕ್ಷಣದಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಲಿ, ಪ್ರಬುದ್ಧರಾಗಿ ಬೆಳೆಯಲಿ ಎಂಬುದೇ ನಮ್ಮ ಉದ್ದೇಶವಾಗಿರುತ್ತದೆ. ಅಂತೆಯೇ, ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹಂತ ತಲುಪಿದರೆ ಅದರಷ್ಟು ಸಂತೋಷದ ಸಂಗತಿ ಯಾವುದಿಲ್ಲ ಎಂದರು.

ಗೌರಾವರ್ಪಣೆ ಸ್ವೀಕರಿಸಿದ ಶಿಕ್ಷಕ ಆರ್‌.ಎಚ್‌. ಉಳ್ಳಾಗಡ್ಡಿ, ಬುದ್ಧಿ ಎಂಬ ಬೀಜ ಬಿತ್ತಿ ಇದೀಗ ಅದರ ಫಲ ನೋಡುತ್ತಿದ್ದೇವೆ. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಮಾಡಿ ತಮ್ಮ ಶಾಲೆಗೆ ಋಣ ತೀರಿಸುತ್ತಿರುವ ಕಾರ್ಯ ಖುಷಿ ತಂದಿದೆ. ಪ್ರತಿಯೊಬ್ಬರು ಆಸೆ, ಅಹಂಕಾರ ತೊರೆಯಬೇಕು. ನಾನೇ, ಎಲ್ಲವೂ ನನ್ನಿಂದಲೇ ಎನ್ನುವ ಮನೋಭಾವ ತೊರೆದರೆ ತಾವು ಜೀವನದಲ್ಲಿ ಮತ್ತಷ್ಟು ಬೆಳೆಯುತ್ತೀರಿ ಎಂದು ಶುಭ ಕೋರಿದರು.

ಶಿಕ್ಷಕರಾದ ಸಿ.ಎ. ಬಲ್ಮಿ, ಮಳೇಕಾರ, ಎಂ.ಪಿ. ಮಲ್ಹಾರ, ಎಂ.ಡಿ. ಮುತ್ತಲಗೇರಿ, ಎ.ಜಿ. ಕೋರಿ, ವಿ.ಎಸ್‌. ಹಿರೇಮಠ, ಡಿ.ಎನ್‌. ಬೋಕಿ, ಸಿ.ಎ. ಸ್ಟೀಫನ್‌, ಎಲ್‌.ಪಿ. ಶಿಂಧೆ, ಲಾರೆನ್ಸ್‌, ರೀಟಾ ನಾಯ್ಕರ, ಬೀರಣ್ಣವರ ಸೇರಿದಂತೆ 15ಕ್ಕೂ ಹೆಚ್ಚು ನಿವೃತ್ತ ಹಾಗೂ ಹಾಲಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಅಗಲಿದ ಶಿಕ್ಷಕರು ಹಾಗೂ ಸ್ನೇಹಿತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರವಿ ಕುಲಕರ್ಣಿ ನಿರೂಪಿಸಿದರು. ವಿನಾಯಕ ಪತಂಗೆ, ಬಸವರಾಜ ಹಿರೇಮಠ ಸ್ವಾಗತಿಸಿದರು. ಚಂದ್ರಶೇಖರ ಶಿವಯ್ಯನಮಠ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ಶಿರಯಣ್ಣವರ ವಂದಿಸಿದರು. ಮಲ್ಲಿಕಾರ್ಜುನ ತಮದಂಡಿ, ಆನಂದ ಪೂಜಾರ, ವೀರೇಶ ಗಡೆನ್ನವರ, ನಾಗೇಶ ಕುಸುಗಲ್‌, ಸಂತೋಷ ಜಾಗೀರದಾರ ಸೇರಿದಂತೆ 50ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಹಳೆ ನೆನಪು ಕೆದಿಕಿದರು:

ಬರೋಬ್ಬರಿ 24 ವರ್ಷಗಳ ನಂತರ ಭೇಟಿಯಾದ ವಿದ್ಯಾರ್ಥಿಗಳು ಶಾಲೆಯ ತುಂಬೆಲ್ಲಾ ಓಡಾಡಿ ಹಳೆಯ ನೆನಪುಗಳನ್ನು ಕೆದಕಿದರು. ತಮ್ಮ ಅಚ್ಚುಮೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ತಾವು ಮಾಡಿದ ಗಲಾಟೆ, ಕೀಟಲೆಗಳನ್ನು ಅವರೆದುರು ಹೇಳಿ ವಿದ್ಯಾರ್ಥಿ ಲೋಕಕ್ಕೆ ಹೋದರು. ಶಿಕ್ಷಕರು ಸಹ ವಿದ್ಯಾರ್ಥಿಗಳ ಬೆಳವಣಿಗೆ ಕಂಡು ಹಾರೈಸಿದರು.

Share this article