ಗದಗ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿ ತನ್ನ ಜೀವನದಲ್ಲಿ ಒಬ್ಬಉತ್ತಮ ಆದರ್ಶ ವಿದ್ಯಾರ್ಥಿಯಾಗುತ್ತಾನೆ. ವಿಶೇಷ ಶಿಬಿರ ಏರ್ಪಡಿಸಿದಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ನೇರವಾಗಿ ಕಂಡಿರುತ್ತಾನೆ. ಇದರಿಂದ ಮುಂದೊಂದು ದಿನ ಒಳ್ಳೆಯ ಸ್ಥಾನ ದೊರೆತ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ರಜಿಸ್ಟರ್ ಡಾ.ಸುರೇಶ್. ಬಿ.ನಾಡಗೌಡರ್ ಹೇಳಿದರು.
ಒಬ್ಬ ವ್ಯಕ್ತಿ ತನ್ನ ಪ್ರತಿಭೆ ಹೊರಹಾಕಲು ವೇದಿಕೆಗಾಗಿ ಕಾಯುತ್ತಿರುತ್ತಾನೆ. ಅಂತಹ ವಿದ್ಯಾರ್ಥಿಗಳಿಗೆ ಈ ದಿನದ ಕಾರ್ಯಕ್ರಮ ಬಹಳಷ್ಟು ಮುಖ್ಯವಾಗಿದೆ. ಯುವಕರು ಈ ದೇಶದ ಬೆನ್ನೆಲುಬು ಹೀಗಾಗಿ ನಮ್ಮ ಮೂಲ ಸಂಸ್ಕೃತಿಕ ಕಲೆ ಉಳಿಸಿ ಬೆಳೆಸುವ ಕಾರ್ಯ ತಮ್ಮದಾಗಿದೆ. ವೇದಿಕೆ ಉಪಯೋಗಿಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ಸಂಸ್ಥೆಯ ಚೇರಮನ ಆನಂದ್ ಪೋತ್ನಿಸ್ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ನಿಮಿತ್ತ ನಮ್ಮ ಸಂಸ್ಥೆಯ ಆವರಣದಲ್ಲಿ ಬೇರೆ ಬೇರೆ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುತ್ತಿರುವುದು ಬಹಳಷ್ಟು ಸಂತಸ ತಂದಿದೆ.ಇಂತಹ ಅತ್ಯುತ್ತಮ ಕಾರ್ಯಕ್ರಮಗಳಿಗೆ ಸಂಸ್ಥೆ ಸದಾ ತಮಗೆ ಸಹಕಾರ ನೀಡುತ್ತದೆ ಎಂದರು.ಈ ವೇಳೆ ಪ್ರಾ. ಪ್ರೊ.ಕೆ. ಗಿರಿರಾಜ ಕುಮಾರ್, ಉಪ ಪ್ರಾ.ಡಾ.ವಿ.ಟಿ. ನಾಯ್ಕರ್, ಪ್ರೊ.ಪ್ರಶಾಂತ್.ಎಚ್.ಮೇರವಾಡಿ, ಪ್ರೊ.ಬಾಹುಬಲಿ ಜೈನರ, ಮನೋಜ್ ದಲಬಂಜನ್ ಹಾಗೂ ಬೇರೆ ಬೇರೆ ರಾಜ್ಯಗಳ ಕಾರ್ಯಕ್ರಮ ಅಧಿಕಾರಿಗಳು ಇದ್ದರು.